ದೇಶ

ಜೂನ್ 6ರ ಒಪ್ಪಂದಕ್ಕೆ ಬದ್ಧವಾಗಲು ಚೀನಾ ವಿಫಲ: ಭಾರತ

Lingaraj Badiger

ನವದೆಹಲಿ: ಮೇ ಆರಂಭದಿಂದ ಭಾರತ-ಚೀನಾ ಪಡೆಗಳು ಮುಖಾಮುಖಿಯಾಗಿ ಪೂರ್ವ ಲಡಾಕ್‌ನಲ್ಲಿ ಎದುರಾಗಿದ್ದ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸಲು ಉಭಯ ದೇಶಗಳ ಹಿರಿಯ ಸೇನಾಧಿಕಾರಿಗಳ ನಡುವೆ ಜೂನ್ 6 ರಂದು ಮಾಡಿಕೊಂಡ ಒಪ್ಪಂದಕ್ಕೆ ಬದ್ಧವಾಗಲು ಚೀನಾ ವಿಫಲವಾಗಿದೆ ಎಂದು ಭಾರತ ಮಂಗಳವಾರ ಆರೋಪಿಸಿದೆ.

ಚೀನಾದ ಸೇನೆಯೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡಿದ ಮೊದಲ ಅಧಿಕೃತ ಪ್ರತಿಕ್ರಿಯೆಯಲ್ಲಿ, ಎರಡೂ ಕಡೆ ಸಾವು-ನೋವುಗಳಾಗಿವೆ. ಉನ್ನತ ಮಟ್ಟದಲ್ಲಿ ಒಪ್ಪಂದವನ್ನು ಚೀನಾದ ಕಡೆ ಸೂಕ್ಷ್ಮವಾಗಿ ಅನುಸರಿಸಿದ್ದರೆ ಇದನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.

‘ಗಡಿ ನಿರ್ವಹಣೆಗೆ ಸಂಬಂಧಿಸಿದಂತೆ ಭಾರತದ ಜವಾಬ್ದಾರಿಯುತ ವಿಧಾನವನ್ನು ಗಮನಿಸಿದರೆ, ಭಾರತದ ಎಲ್ಲಾ ಚಟುವಟಿಕೆಗಳು ಗಡಿಯಲ್ಲಿ ಭಾರತದ ಕಡೆಯಲ್ಲೇ ಇವೆ ಎಂಬುದು ಸ್ಪಷ್ಟವಾಗಿದೆ. ಚೀನಾದ ಕಡೆಯಿಂದಲೂ ನಾವು ಅದೇ ರೀತಿ ನಿರೀಕ್ಷಿಸುತ್ತೇವೆ.’ ಎಂದು ವಿದೇಶಾಂಗ ಸಚಿವಾಲಯ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿದ್ದಾರೆ. 

ಚೀನಾ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದರೆ ಈ ಸಂಘರ್ಷ ತಪ್ಪಿಸಬಹುದಿತ್ತು. ಆದರೆ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಚೀನಾ ಪ್ರಯತ್ನಿಸಿದರ ಫಲವೇ ಈ ಸಂಘರ್ಷ ಎಂದು ಅವರು ಹೇಳಿದ್ದಾರೆ.

SCROLL FOR NEXT