ದೇಶ

ವಿಶ್ವಸಂಸ್ಥೆ ವೇದಿಕೆಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪ: ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಭಾರತ

Sumana Upadhyaya

ನವದೆಹಲಿ: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿ(ಯುಎನ್ಎಚ್ಆರ್ ಸಿ)ಯಲ್ಲಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಕಾರಣ ಭಾರತ ಎಂದು ಹೇಳುತ್ತಿರುವ ಪಾಕಿಸ್ತಾನವನ್ನು ಭಾರತ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಈ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಮಂಡಳಿಯಲ್ಲಿ ಮಾತನಾಡಿದ ಭಾರತದ ಶಾಶ್ವತ ಆಯೋಗದ ಮೊದಲ ಕಾರ್ಯದರ್ಶಿ ಸೆಂಥಿಲ್ ಕುಮಾರ್, ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆಯನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತಿದ್ದು ಬೇರೆಯವರಿಗೆ ಸಲಹೆ ಕೊಡುವ ಮೊದಲು ತನ್ನ ದೇಶದ ಮಾನವ ಹಕ್ಕುಗಳ ಸ್ಥಿತಿಗತಿ ಬಗ್ಗೆ ಪಾಕಿಸ್ತಾನ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಮಾನವೀಯತೆ, ಮನುಷ್ಯರ ವಿರುದ್ಧ ಅಪರಾಧಗಳು ನಡೆಯುತ್ತಲೇ ಇರುತ್ತವೆ. ಮನುಷ್ಯರು ಬಲವಂತದಿಂದ ಕಣ್ಮರೆಯಾಗುವುದು, ಹಿಂಸಾಚಾರ, ಬಲವಂತದ ಸಾಮೂಹಿಕ ಸ್ಥಳಾಂತರ, ಕಾನೂನು ಬಾಹಿರ ಹತ್ಯೆಗಳು, ಸೇನಾ ಕಾರ್ಯಾಚರಣೆಗಳು, ಚಿತ್ರಹಿಂಸೆ ನೀಡುವ ಶಿಬಿರಗಳು, ಬಂಧನ ಕೇಂದ್ರಗಳು ಮತ್ತು ಮಿಲಿಟರಿ ಶಿಬಿರಗಳು ಬಲೂಚಿಸ್ತಾನದಲ್ಲಿ ಸಾಮಾನ್ಯ ಸಂಗತಿಗಳಾಗಿವೆ ಎಂದು ನಿನ್ನೆ ವಿಶ್ವಸಂಸ್ಥೆ ಮಾನವ ಹಕ್ಕು ಮಂಡಳಿಯಲ್ಲಿ ಪ್ರಸ್ತಾಪಿಸಿದರು.

ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನ ಸಂವಿಧಾನ ವಿಧಿ 370ನ್ನು ರದ್ದುಗೊಳಿಸಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಈ ನಿರ್ಧಾರದ ಹಿಂದೆ ಯಾವುದೇ ಹೊರಗಿನ ಪ್ರಚೋದನೆಗಳಿಲ್ಲ. ಇದು ಭಾರತಕ್ಕೆ ಸಂಬಂಧಿಸಿದ ವಿಷಯ. ಜಮ್ಮು-ಕಾಶ್ಮೀರದ ಜನರು ಈ ನಿರ್ಧಾರವನ್ನು ಸ್ವಾಗತಿಸಿದ್ದು ಈ ವಿಚಾರದಲ್ಲಿ ಬಹಳ ಮುಂದೆ ಸಾಗಿದ್ದೇವೆ ಎಂದರು.

ಮಾನವ ಹಕ್ಕುಗಳ ಮಂಡಳಿ ಮತ್ತು ಅದರ ಕಾರ್ಯವಿಧಾನವನ್ನು ದುರುಪಯೋಗಪಡಿಸಿಕೊಂಡ ದೇಶ ಪಾಕಿಸ್ತಾನ. ನರಮೇಧವನ್ನು ಉಂಟುಮಾಡುವ ದಕ್ಷಿಣ ಏಷ್ಯಾದ ಏಕೈಕ ದೇಶ ಪಾಕಿಸ್ತಾನ ಇಂದು ಬೇರೆಯವರ ಮೇಲೆ ಆರೋಪ ಹೊರಿಸುತ್ತಿದೆ ಎಂದು ಆರೋಪಿಸಿದರು.

SCROLL FOR NEXT