ದೇಶ

ಉತ್ತರ ಪ್ರದೇಶ: ಮದ್ಯವ್ಯಸನಿ ಮಂಗನಿಗೆ ಇನ್ನು ಸೆರೆವಾಸವೇ ಗತಿ!

Sumana Upadhyaya

ಕಾನ್ಪುರ: ಮಂಗಗಳ ಜೀವನವೆಂದರೆ ಮರದಿಂದ ಮರಕ್ಕೆ ಹಾರುತ್ತಾ, ಇಷ್ಟಪಟ್ಟಲ್ಲಿಗೆ ಹೋಗುತ್ತಾ, ಇಷ್ಟಪಟ್ಟಿದ್ದನ್ನು ತಿನ್ನುತ್ತಾ ಸ್ವಚ್ಛಂದವಾಗಿ ಕಳೆಯುವ ಬದುಕು. ಆದರೆ ಇಲ್ಲಿ ಮಂಗನಿಗೆ ಸೆರೆವಾಸ ನೀಡಲಾಗಿದೆ ಎಂದರೆ ನಂಬುತ್ತೀರಾ? ಉತ್ತರ ಪ್ರದೇಶದ ಕಾನ್ಪುರ ಮೃಗಾಲಯದ ಮಂಗನೊಂದು ಇನ್ನುಳಿದ ಜೀವಿತಾವಧಿಯನ್ನು ಸೆರೆವಾಸದಲ್ಲಿಯೇ ಕಳೆಯಬೇಕು.

ಮಿರ್ಜಾಪುರ ಜಿಲ್ಲೆಯ ಕಲುವಾ ಎಂಬ ಹೆಸರಿನ ಮಂಗ ಸುಮಾರು 250 ಜನರಿಗೆ ಕಚ್ಚಿತ್ತು, ಅವರಲ್ಲಿ ಒಬ್ಬ ತೀರಿಕೊಂಡಿದ್ದ. ಸ್ಥಳೀಯ ಮಾಂತ್ರಿಕನಿಗೆ ಈ ಮಂಗನೆಂದರೆ ಬಲು ಅಚ್ಚುಮೆಚ್ಚು. ಪ್ರತಿದಿನ ಕುಡಿಯಲು ಮದ್ಯ ನೀಡುತ್ತಿದ್ದರಂತೆ.

ಮದ್ಯ ಕುಡಿದು ಕೆಲ ಸಮಯಗಳ ನಂತರ ಅದು ಚಟವಾಗಿ ಪರಿಣಮಿಸಿತು. ಈ ಮಾಂತ್ರಿಕ ತೀರಿಹೋದ ನಂತರ ಮಂಗನಿಗೆ ಲಿಕ್ಕರ್ ಸಿಗುವುದು ನಿಂತುಹೋಯಿತು. ಆಗ ಮಂಗ ಸಿಟ್ಟಿನಿಂದ ತನ್ನೆದುರು ಸಿಕ್ಕವರನ್ನು ಕಚ್ಚುತ್ತಾ ದಾಂಧಲೆ ಎಬ್ಬಿಸುತ್ತಿತ್ತು. ಮಿರ್ಜಾಪುರದ ಜನ ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ಮಂಗನನ್ನು ಹಿಡಿಯುವುದಕ್ಕೆ ಹೇಳಿದರು.

ತೀವ್ರ ಪ್ರಯತ್ನಪಟ್ಟು ಕಲುವಾ ಮಂಗನನ್ನು ಹಿಡಿದು ಕಾನ್ಪುರ ಮೃಗಾಲಯಕ್ಕೆ ಕರೆತರಲಾಯಿತು. ಇಲ್ಲಿಗೆ ಕರೆತಂದು ಮೂರು ವರ್ಷಗಳಾಗಿವೆ. ಆರಂಭದಲ್ಲಿ ಪ್ರತ್ಯೇಕವಾಗಿಟ್ಟು ನೋಡಿದೆವು, ಆದರೆ ಮಂಗನ ಕ್ರೋಧ ವರ್ತನೆಯಲ್ಲಿ ಬದಲಾಗಿಲ್ಲ. ಹೀಗಾಗಿ ಮಂಗನನ್ನು ಇನ್ನು ಜೀವನವಿಡೀ ಜೈಲಿನಲ್ಲಿಡಲು ತೀರ್ಮಾನಿಸಿದ್ದೇವೆ ಎಂದು ಮೃಗಾಲಯ ವೈದ್ಯ ಮೊಹಮ್ಮದ್ ನಸೀರ್ ಹೇಳುತ್ತಾರೆ.

ಮಂಗನಿಗೆ ಈಗ 6 ವರ್ಷ. ಅದನ್ನು ಹೊರಗೆ ಬಿಟ್ಟರೆ ಜನರಿಗೆ ತೊಂದರೆ ಕೊಡುವ ಸಾಧ್ಯತೆಯಿದೆ. ಹೀಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುತ್ತಾರೆ.

SCROLL FOR NEXT