ದೇಶ

ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನ, ತೀವ್ರ ಆತಂಕಕ್ಕೆ ಕಾರಣವಾಗಿದೆ: ಲೆಫ್ಟಿನೆಂಟ್ ಜನರಲ್ ಡಿ.ಎಸ್. ಹೂಡಾ

Sumana Upadhyaya

ನವದೆಹಲಿ: ಪೂರ್ವ ಲಡಾಕ್ ಸಂಘರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಸಾವು-ನೋವು ಸಂಭವಿಸಿದೆ. ಭಾರತದ ಕಡೆಯ ಕನಿಷ್ಠ 20 ಯೋಧರು ಹುತಾತ್ಮರಾಗಿದ್ದಾರೆ.

ಪೂರ್ವ ಲಡಾಕ್ ನಲ್ಲಿ ಕಳೆದ ಮೇ 5ರಂದು ಚೀನಾ ಸೇನಾಪಡೆಯನ್ನು ನಿಯೋಜಿಸಿದ ನಂತರ ಭಾರತ ಸಹ ತನ್ನ ಸೇನಾಪಡೆಯನ್ನು ನಿಯೋಜಿಸಿತ್ತು. ಬಳಿಕ ಗಡಿ ಸಮಸ್ಯೆಯನ್ನು ಶಾಂತಿ ಮಾತುಕತೆ ಮೂಲಕ ಬಗೆಹರಿಸೋಣವೆಂದು ಈಗಾಗಲೇ ಐದಾರು ಸುತ್ತಿನ ಮಾತುಕತೆ ಸಹ ಮುಗಿದಿತ್ತು. ಆದರೆ ನಿನ್ನೆ ಇದ್ದಕ್ಕಿದ್ದಂತೆ ಗಡಿಯಲ್ಲಿ ಘರ್ಷಣೆ ನಡೆದಿದೆ. ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಚೀನಾ ಕಡೆಯ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವರದಿ ಬಂದಿದ್ದು ನಿಜಕ್ಕೂ ಆಘಾತಕಾರಿ ವಿಷಯ ಎಂದು ಭಾರತೀಯ ಸೇನೆಯ ಕಮಾಂಡಿಂಗ್ ಇನ್ ಚೀಫ್ ಮಾಜಿ ಜನರಲ್ ಆಫೀಸರ್ ಲೆ.ಜ.ಡಿ ಎಸ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ-ಚೀನಾ ಸಮಸ್ಯೆಯನ್ನು ಬಗೆಹರಿಸಲು ಕೆಲವು ಕಠಿಣ ಮಾತುಕತೆಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಮೊದಲಿಗೆ ಭಾವಿಸಲಾಗಿತ್ತು ಆದರೆ ಇತ್ತೀಚಿನ ಹಿಂಸಾಚಾರವು ಸಾವಿಗೆ ಕಾರಣವಾಗಿರುವುದರಿಂದ ಇನ್ನು ಮುಂದೆ ನಿರ್ಣಯಿಸುವುದು ಕಷ್ಟವಾಗಬಹುದು. ಎರಡೂ ರಾಷ್ಟ್ರಗಳ ಬೇಡಿಕೆಗಳು ಯಾವುವು, ಎರಡೂ ದೇಶಗಳು ಹೊಂದಾಣಿಕೆ ಮಾಡಿಕೊಳ್ಳಲು ಸಿದ್ಧವಿದೆಯೇ ಎಂಬುದರ ಮೇಲೆ ಮುಂದಿನ ವಿಷಯ ನಿರ್ಧಾರವಾಗುತ್ತದೆ.

ಕಳೆದ ಬಾರಿಯ ಡೋಕ್ಲಾಮ್ ಅಥವಾ ಚುಮಾರ್ ಘಟನೆಗಳಿಗೆ ವಿರುದ್ಧವಾಗಿ ಈ ಬಾರಿ ಚೀನಾದ ಉದ್ದೇಶಗಳ ಬಗ್ಗೆ ನಮಗೆ ಹೆಚ್ಚು ತಿಳಿದಿಲ್ಲ. ಚೀನಾ ದೇಶ ಪೂರ್ವ ಲಡಾಕ್ ನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಅದನ್ನು ಭಾರತ ವಿರೋಧಿಸಿ ಘರ್ಷಣೆ ಆರಂಭವಾಗಿದೆ. ಚೀನೀಯರ ಆಕಾಂಕ್ಷೆಗೆ ಭಾರತ ಒಪ್ಪದಿದ್ದರೆ ಈ ಬಾರಿ ಹೆಚ್ಚಿನ ಉದ್ವಿಗ್ನತೆಗೆ ಕಾರಣವಾಗಬಹುದು. ಗಡಿ ವಾಸ್ತವ ರೇಖೆಯ ಉದ್ದಕ್ಕೂ ಮೂಲ ಸ್ಥಾನಕ್ಕೆ ಮರಳಲು ಚೀನಾ ಒಪ್ಪಿದರೆ ಉದ್ವಿಗ್ನತೆ ಕಡಿಮೆಯಾಗಬಹುದು. ಆದರೆ, ಈ ಬಾರಿ ಚೀನಿಯರು ಆ ಪ್ರದೇಶದಿಂದ ಹಿಂದೆ ಸರಿಯಲು ಒಪ್ಪುವ ಹಾಗೆ ಕಾಣುತ್ತಿಲ್ಲ ಎಂದು ಲೆ.ಜ.ಡಿ ಎಸ್ ಹೂಡಾ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT