ದೇಶ

ಗಲ್ವಾನ್ ಸಂಘರ್ಷ: ಸೇನೆ ಹಿಂತೆಗೆದುಕೊಳ್ಳಲು ಭಾರತ-ಚೀನಾ ಒಮ್ಮತದ ನಿರ್ಧಾರ!

Srinivasamurthy VN

ನವದೆಹಲಿ: ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಲಡಾಖ್ ಗಡಿಯಲ್ಲಿ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸುವ ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಪ್ರಯತ್ನಕ್ಕೆ ಮಹತ್ವದ ಜಯ ಲಭಿಸಿದ್ದು, ಎರಡೂ ಸೇನಾ ಮುಖ್ಯಸ್ಥರು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದಾರೆ.

ಹೌದು.. ಲಡಾಖ್​ನ ಪೂರ್ವ ಭಾಗದ ನಾಲ್ಕು ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಚೀನಾ ಮತ್ತು ಭಾರತದ ಸೈನಿಕರು ಕೂಡಲೇ ಬಿಕ್ಕಟ್ಟಿನ ಪ್ರದೇಶವನ್ನು ಬಿಟ್ಟು ಹಿಂದಕ್ಕೆ ಸರಿಯುವ ಕುರಿತು ಮಹತ್ವದ ಒಮ್ಮತಗ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಸತತ ಒಂದು ವಾರದಿಂದ ನಡೆಯುತ್ತಿರುವ ಸೇನಾ ಮುಖ್ಯಸ್ಥರ ಸಭೆಯಲ್ಲಿ ಇಂದು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಎರಡೂ ದೇಶಗಳ ಸೇನಾ ಮುಖ್ಯಸ್ಥರು ಸೇನೆಯನ್ನು ಹಿಂತೆಗೆಯಬೇಕು ಎಂಬ ವಿಷಯವಾಗಿ ಒಮ್ಮತಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಭಾರತ ಮತ್ತು ಚೀನಾದ ಕೋರ್​ ಕಮಾಂಡರ್​ ಮಟ್ಟದ ಸಭೆಯಲ್ಲಿ ಇಂತಹ ಒಮ್ಮತಾಭಿಪ್ರಾಯ ಮೂಡಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ. ಇದೀಗ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ನಿಯೋಜಿಸಿರುವ ಸೇನಾಪಡೆಯನ್ನು ಹಿಂಪಡೆಯುವ ಕ್ರಮಗಳ ಕುರಿತು ಚರ್ಚಿಸಲಾಗಿದೆ. ಈ ಬಗ್ಗೆ ಮಾತುಕತೆಗಳು ಮುಂದುವರಿಯಲಿವೆ. ಮಾತುಕತೆ ಅತ್ಯಂತ ಸೌಹಾರ್ದಯುತವಾಗಿ, ಸಕಾರಾತ್ಮಕವಾಗಿ ಮತ್ತು ರಚನಾತ್ಮಕವಾಗಿ ನಡೆದಿದ್ದಾಗಿ ಮೂಲಗಳು ತಿಳಿಸಿವೆ.

ಭಾರತೀಯ ಸೈನ್ಯದ 14 ಕಾರ್ಪೋರೇಷನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ದಕ್ಷಿಣ ಕ್ಸಿನ್‌ ಜಿಯಾಂಗ್ ಪ್ರದೇಶದ ಚೀನಾದ ಪಿಎಲ್ಎ ಕಮಾಂಡರ್ ಮೇಜರ್ ಜನರಲ್ ಲಿನ್ ಲಿಯು ನಡುವಿನ ಸಭೆ ಮೊಲ್ಡೊದಲ್ಲಿ ನಡೆದಿತ್ತು. ಇದೀಗ 14 ಕಾರ್ಪ್​ ಅಧಿಕಾರಿಗಳನ್ನು ಭೇಟಿಯಾಗಿ ಮಾತುಕತೆಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವ ಜತೆಗೆ ವಾಸ್ತವ ಪರಿಸ್ಥಿತಿಯನ್ನು ಅರಿತುಕೊಳ್ಳಲು ಸೇನಾಪಡೆ ಮುಖ್ಯಸ್ಥ ಜನರಲ್​ ಎಂ.ಎಂ. ನರವಾನೆ ಈಗಾಗಲೆ ಲಡಾಖ್​ಗೆ ತೆರಳಿದ್ದಾರೆ.

SCROLL FOR NEXT