ದೇಶ

ಆಂಧ್ರ ಪ್ರದೇಶದಲ್ಲಿ ಮತ್ತೊಂದು ಅನಿಲ ದುರಂತ: ವಿಶಾಖಪಟ್ಟಣ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ; 2 ಸಾವು, ನಾಲ್ವರು ಅಸ್ವಸ್ಥ

Manjula VN

ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಮತ್ತೊಂದು ಅನಿಲ ದುರಂತ ಸಂಭವಿಸಿದ್ದು, ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾದ ಹಿನ್ನೆಲೆಯಲ್ಲಿ ಇಬ್ಬರು ಸಾವನ್ನಪ್ಪಿ, ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಮಂಗಳವಾರ ನಡೆದಿದೆ. 

ವಿಶಾಖಪಟ್ಟಣದಲ್ಲಿರುವ ಸೈನರ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್' ಕಾರ್ಖಾನೆಯಿಂದ ಬೆಂಜಿಮಿಡಾಜೋಲ್ ಎಂಬ ವಿಷಾನಿಲ ಸೋರಿಕೆಯಾಗಿದ್ದು, ಈ ವೇಳೆ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಇನ್ನು ಘಟನೆಯಲ್ಲಿ ನಾಲ್ವರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

ಈ ಕುರಿತು ಪ್ರತಿಕ್ರಿಯೆ ನೀಡಿರುವ ಪರ್ವಾಡ ಠಾಣೆ ಇನ್ಸ್'ಪೆಕ್ಟರ್ ಪವನ್ ಕುಮಾರ್ ಅವರು, ವಿಷಾನಿಲ ಸೋರಿಕೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರನ್ನು ಈಗಾಗಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮೃತಪಟ್ಟ ಇಬ್ಬರು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೌಕರರೇ ಆಗಿದ್ದು, ಅನಿಲ ಸೋರಿಕೆಯಾದ ಸಂದರ್ಭದಲ್ಲಿ ಇಬ್ಬರು ಸ್ಥಳದಲ್ಲಿಯೇ ಇದ್ದರು ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ. 

ಕಳೆದ ರಾತ್ರಿ 11.30ರ ಸುಮಾರಿಗೆ ದುರ್ಘಟನೆ ಸಂಭವಿಸಿದ್ದು, ಘಟನೆ ಕುರಿತು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯವರು ವರದಿ ಪಡೆದುಕೊಂಡಿದ್ದಾರೆ. 

ಈ ನಡುವೆ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕಚೇರಿ, ಘಟನೆ ಬಳಿಕ ಕಾರ್ಖಾನೆಯನ್ನು ಬಂದ್ ಮಾಡಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. 

SCROLL FOR NEXT