ದೇಶ

ನಿರ್ಭಯಾ: ದೋಷಿ ಮುಖೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಜಾ, ನಾಳೆ ಎಲ್ಲ ಅಪರಾಧಿಗಳಿಗೆ ಗಲ್ಲು ಫಿಕ್ಸ್!

Srinivasamurthy VN

ನವದೆಹಲಿ: 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಮುಖೇಶ್ ಸಿಂಗ್ ಸಲ್ಲಿಕೆ ಮಾಡಿದ್ದ ಅರ್ಜಿಯನ್ನೂ ಕೂಡ ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದ್ದು, ನಾಳೆ ಎಲ್ಲ ನಾಲ್ಕೂ ಮಂದಿ ಅಪರಾಧಿಗಳನ್ನು ಗಲ್ಲಿಗೇರಿಸುವುದು ಬಹುತೇಕ ಖಚಿತವಾಗಿದೆ.

ಈ ಹಿಂದೆ ಪ್ರಕರಣ ನಡೆದಾಗ ತಾನು ಘಟನಾ ಪ್ರದೇಶದಲ್ಲಿ ಇರಲಿಲ್ಲ. ಹೀಗಾಗಿ ತನ್ನ ಗಲ್ಲು ಶಿಕ್ಷೆ ಮತ್ತು ಡೆತ್ ವಾರೆಂಟ್ ಗೆ ತಡೆ ನೀಡಬೇಕು ಎಂದು ಕೋರಿ ಮುಖೇಶ್ ಸಿಂಗ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದ. ಆದರೆ ದೆಹಲಿ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ನಲ್ಲಿ ದೆಹಲಿ ಹೈಕೋರ್ಟ್ ನ ನಡೆಯನ್ನು ಮುಖೇಶ್ ಸಿಂಗ್ ಪ್ರಶ್ನಿಸಿದ್ದ. ಇದೀಗ ಈ ಪ್ರಕರಣದ ವಿಚಾರಣೆ ನಡೆಸಿದ ಆರ್ ಭಾನುಮತಿ, ಅಶೋಕ್ ಭೂಷಣ್ ಮತ್ತು ಎಎಸ್ ಬೋಪಣ್ಣ ನೇತೃತ್ವದ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಈ ವೇಳೆ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಎಲ್ಲ ರೀತಿಯ ಅವಕಾಶ ನೀಡಲಾಗಿತ್ತು. ಅದೇ ರೀತಿ ಸಂತ್ರಸ್ಥೆ ಪರ ವಕೀಲರಿಗೂ ಎಲ್ಲ ರೀತಿಯ ಅವಕಾಶ ನೀಡಲಾಗಿತ್ತು. ಪ್ರಕರಣ ಸಂಬಂಧ ಎಲ್ಲ ಅಂಶಗಳನ್ನೂ ವಿಚಾರಣೆಯಲ್ಲಿ ಚರ್ಚೆ ನಡೆಸಲಾಗಿದೆ. ಪರ-ವಿರೋಧ ವಾದ ಆಲಿಸಲಾಗಿದೆ. ಪುನರ್ ಪರಿಶೀಲನಾ ಅರ್ಜಿಗಳನ್ನೂ ಪರಿಶೀಲಿಸಿ ತೀರ್ಪು ನೀಡಲಾಗಿದೆ. ಈಗ ಅಂತಿಮ ಹಂತದಲ್ಲಿ ಯಾವುದೇ ರೀತಿಯ ಹೊಸ ಸಾಕ್ಷ್ಯಗಳನ್ನು ಕೋರ್ಟ್ ಪರಿಗಣಿಸುವುದಿಲ್ಲ. ಹೀಗಾಗಿ ಮುಖೇಶ್ ಸಿಂಗ್ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಹೇಳಿದೆ.

ದೋಷಿಗಳಿಗೆ ಎಲ್ಲಾ ಮಾರ್ಗ ಬಂದ್
ಡೆತ್ ವಾರಂಟ್ ಮತ್ತು ಮರಣದಂಡನೆ ದಿನಾಂಕದ ನಡುವೆ 14 ದಿನಗಳ ವ್ಯತ್ಯಾಸ ಇರಬೇಕು ಎಂದು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಹೇಳುತ್ತವೆ. ಅದರಂತೆ ಮಾರ್ಚ್ 5ರಂದು ಅಪರಾಧಿಗಳ ಡೆತ್ ವಾರಂಟ್ ಹೊರಡಿಸಲಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳಿಗೆ ಎಲ್ಲಾ ಕಾನೂನು ಮಾರ್ಗಗಳು ಸಹ ಮುಗಿದಿವೆ. ಮರಣದಂಡನೆಗೆ ಗುರಿಯಾದ ಅಪರಾಧಿಗೆ ಎಲ್ಲಾ ಕಾನೂನು ಮಾರ್ಗಗಳನ್ನು ಬಳಸುವ ಹಕ್ಕಿದೆ. ಈ ನಿಟ್ಟಿನಲ್ಲಿ ನಾಲ್ವರು ಸಹ ತಮ್ಮ ಎಲ್ಲಾ ಕಾನೂನು ಹಕ್ಕುಗಳನ್ನು ಸಹ ಬಳಸಿದ್ದಾರೆ. ನಾಲ್ವರ ಪರಿಶೀಲನಾ ಅರ್ಜಿಗಳು ಮತ್ತು ಕ್ಷಮಾದಾನ ಅರ್ಜಿಗಳನ್ನು ಸಹ ವಜಾಗೊಂಡಿವೆ. ಅಪರಾಧಿಗಳು ಗಲ್ಲಿಗೇರಿಸುವುದನ್ನು ತಪ್ಪಿಸಲು ಇಂದು ಕೂಡ ಅರ್ಜಿಯನ್ನು ಹಾಕಿದರೂ ಅವರನ್ನು ಗಲ್ಲಿಗೇರಿಸುವುದನ್ನು ತಪ್ಪಿಸುವುದು ತುಂಬಾ ಕಡಿಮೆ ಎನ್ನಲಾಗುಗುತ್ತಿದೆ. ಏಕೆಂದರೆ ಭಯೋತ್ಪಾದಕ ಯಾಕೂಬ್ ಮೆಮನ್ ನೇಣು ಹಾಕುವ ಒಂದು ದಿನ ಮೊದಲು ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಆದರೆ ಅರ್ಜಿಯನ್ನು ತಿರಸ್ಕರಿಸಿದ ನಂತರ ಅವರ ವಕೀಲರು ರಾತ್ರಿ ಸುಪ್ರೀಂ ಕೋರ್ಟಿಗೆ ತಲುಪಿದರು. ಆದರೆ ಇದರ ಹೊರತಾಗಿಯೂ ಅವನ ನೇಣು ನಿಲ್ಲಲಿಲ್ಲ.

ಇದೇ ಪ್ರಕರಣದ ಆಧಾರದ ಮೇಲೆ ನಾಳೆಯೇ ಎಲ್ಲ ನಾಲ್ಕೂ ಮಂದಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿ ಮಾಡುವ ಸಾಧ್ಯತೆ ಇದೆ.

ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೆ ಸಕಲ ಸಿದ್ಧತೆ ಪೂರ್ಣ
ಇನ್ನು ನಿರ್ಭಯ ದೋಷಿಗಳನ್ನು ಗಲ್ಲಿಗೇರಿಸಲಿರುವ ತಿಹಾರ್ ಜೈಲಿನಲ್ಲಿ ಗಲ್ಲು ಶಿಕ್ಷೆ ಜಾರಿಗೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ. ನಿರ್ಭಯಾ ದೋಷಿಗಳಾದ ಪವನ್ ಗುಪ್ತಾ, ಮುಖೇಶ್ ಸಿಂಗ್, ಅಕ್ಷಯ್ ಕುಮಾರ್ ಮತ್ತು ವಿನಯ್ ಶರ್ಮಾ ಅವರ ತೂಕದಷ್ಟೇ ಮರಳು ಚೀಲಗಳನ್ನು ನೇಣುಗಂಬಕ್ಕೆ ಕಟ್ಟಿ ಪರೀಕ್ಷೆ ನಡೆಸಲಾಗಿದೆ.  ಹ್ಯಾಂಗ್ ಮನ್ ಪವನ್ ಜಲ್ಲಾಡ್ ನೇಣುಗಂಬಕ್ಕೆ ಮರಳಿನ ಚೀಲಗಳನ್ನು ಕಟ್ಟಿ ಪರೀಕ್ಷೆ ನಡೆಸಿದ್ದಾರೆ. ಪವನ್ ಜಲ್ಲಾಡ್ ನ ತಂದೆ ಕೂಡ ಹ್ಯಾಂಗ್ ಮನ್ ಆಗಿ ಸೇವೆ ಸಲ್ಲಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ಮಾಡಿದ್ದ ಸತ್ವಂತ್ ಸಿಂಗ್ ಮತ್ತು ಕೆಹರ್ ಸಿಂಗ್ ರನ್ನು ಗಲ್ಲಿಗೇರಿಸಿದ್ದರು.  ಇನ್ನು ಅಪರಾಧಿಗಳನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿ ಓರ್ವ ವೈದ್ಯೇ, ಓರ್ವ ಫಿಸಿಯೋ ಥೆರಪಿಸ್ಟ್, ಜೈಲಿನ ಹಿರಿಯ ಅಧಿಕಾರಿಗಳು, ಹಾಗೂ ನ್ಯಾಯಾಲಯದ ಅಧಿಕಾರಿಗಳು ಇರಲಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT