ದೇಶ

ಕೊರೋನಾ ಸಂಕಷ್ಟ; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ; ಸಹಕಾರದ ಭರವಸೆ

Nagaraja AB

ನವದೆಹಲಿ: ಕೋವಿಡ್  19 ವೈರಸ್ ಸೋಂಕು ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅದರ ಕಾರ್ಯಕರ್ತರು ಸರ್ಕಾರದ ಪರವಾಗಿ ನಿಲ್ಲಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ  ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ

ಇಡೀ  ಪ್ರಪಂಚದಾದ್ಯಂತ ಮಾನವಕುಲಕ್ಕೆ ಕಂಟಕ ಎದುರಾಗಿರುವ ಸಂದರ್ಭದಲ್ಲಿ ನಾನು ಮತ್ತು ನಮ್ಮ  ಪಕ್ಷದ ಕೋಟ್ಯಂತರ ಕಾರ್ಯಕರ್ತರು ನಿಮ್ಮ ಜತೆ ನಿಲ್ಲುವುದಾಗಿ ಈ ಮೂಲಕ ತಿಳಿಸಲು  ಬಯಸುತ್ತೇನೆ. ಭಾರತದಲ್ಲಿ ಹರಡುತ್ತಿರುವ ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ  ಸರ್ಕಾರ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರಕ್ಕೂ ನಾವು ಸರ್ವ ರೀತಿಯ ಸಹಕಾರವನ್ನು  ನೀಡುತ್ತಿದ್ದೇವೆ ಎಂದು ಪತ್ರದಲ್ಲಿ ರಾಹುಲ್ ಭರವಸೆ ನೀಡಿದ್ದಾರೆ.

ಕೋವಿಡ್ 19  ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸಲು ತಕ್ಷಣವೇ  ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಭಾರತ ಈಗ ಮೂರು ವಾರಗಳ  ಕಾಲ ಲಾಕ್ ಡೌನ್ ಪರಿಸ್ಥಿತಿಯಲ್ಲಿದೆ. ದೇಶದಾದ್ಯಂತ ಈ ಲಾಕ್ ಡೌನ್ ನಿಂದಾಗಿ ನಮ್ಮ  ಜನರು, ಸಮಾಜ ಮತ್ತು ಆರ್ಥಿಕತೆಯ ಮೇಲೆ ಭಾರಿ ಪ್ರಮಾಣದ ದುಷ್ಪರಿಣಾಮ ಬೀರಲಿದೆ.

ಲಾಕ್ ಡೌನ್ ನಿಂದ ತೀವ್ರ ಆತಂಕ ಹಾಗೂ ಗೊಂದಲದಲ್ಲಿ ಸಿಲುಕಿರುವ ಬಡ ಕೂಲಿಕಾರ್ಮಿಕರಿಗೆ ಅಗತ್ಯ ನೆರವು ನೀಡಬೇಕಾಗಿದೆ. ಕಾರ್ಖಾನೆಗಳು, ಸಣ್ಣ ಉದ್ಯಮಗಳು, ಕಟ್ಟಡ ನಿರ್ಮಾಣ ಸ್ಥಗಿತದಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳತ್ತಾ ತೆರಳುತ್ತಿದ್ದು, ವಿವಿಧ ರಾಜ್ಯಗಳ ಗಡಿಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತವರಿಗೆ ವಸತಿ ವ್ಯವಸ್ಥೆ ನೀಡಬೇಕಾಗಿದೆ. ಮುಂದಿನ ಕೆಲ ದಿನಗಳ ಮಟ್ಟಿಗೆ ಅವರಿಗೆ ಯಾವುದೇ ತೊಂದರೆಯಾಗದ ನಿಟ್ಟಿನಲ್ಲಿ ಅವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಬೇಕಾಗಿದೆ ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

SCROLL FOR NEXT