ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮರ್ಕಝ್ ನಿಜಾಮುದ್ದೀನ್ ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದ್ದು, ಇದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ ತಾನು ಯಾವುದೇ ಕಾನೂನು ಉಲ್ಲಂಘಿಸಿ ಧಾರ್ಮಿಕ ಸಭೆ ನಡೆಸಿಲ್ಲ ಎಂದು ಮರ್ಕಝ್ ನಿಜಾಮುದ್ದೀನ್ ಮಂಗಳವಾರ ಸ್ಪಷ್ಟಪಡಿಸಿದೆ.
ಧಾರ್ಮಿಕ ಸಭೆ ಆಯೋಜನೆಗೆ ಸಂಬಂಧಿಸಿದಂತೆ ನಾವು ಯಾವುದೇ ಕಾನೂನು ಉಲ್ಲಂಘಿಸಿಲ್ಲ ಎಂದು ಸುಮಾರು 100 ವರ್ಷಗಳಷ್ಟು ಹಳೆ ಕಾಲದ ತಬೀಲ್ಘಿ ಜಮಾಅತ್‌ನ ಅಂತರಾಷ್ಟ್ರೀಯ ಕೇಂದ್ರ ಕಚೇರಿ ಮಾರ್ಕಾಜ್ ನಿಜಾಮುದ್ದೀನ್ ಇಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಈ ಸಂಬಂಧ ಅಧಿಕಾರಿಗಳೊಂದಿಗೆ ತಾನು ಸಹಕರಿಸುವುದಾಗಿ ತಿಳಿಸಿದೆ.
ನಿಜಾಮುದ್ದೀನ್ ಮರ್ಕಝ್‌ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 24 ಮಂದಿಯಲ್ಲಿ ಕೋವಿಡ್ - 19 ಸೋಂಕು ದೃಢಪಟ್ಟಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ಹೇಳಿದ್ದಾರೆ. ಅಲ್ಲದೆ ಲಾಕ್‌ಡೌನ್‌ನ ಹೊರತಾಗಿಯೂ ಧಾರ್ಮಿಕ ಸಭೆ ನಡೆಸಿರುವುದು ಗಂಭೀರ ಅಪರಾಧ. ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.