ನವದೆಹಲಿ: ಕೋವಿಡ್-19 ಸಮುದಾಯ ಪ್ರಸರಣದ ಹಂತ ತಲುಪಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ ಸೋಂಕಿನ ಬಗೆಗಿನ ನಡವಳಿಕೆಗಳಲ್ಲಿನ ಬದಲಾವಣೆಗಳು ಹೊಸ ಆರೋಗ್ಯಕರ ಸಮಾಜಕ್ಕೆ ಸಾಮಾನ್ಯ ಎಂಬಂತಾಗಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ದೇಶವಾಸಿಗಳು ತಮ್ಮ ದೈನಂದಿನ ಜೀವನದಲ್ಲಿ ಕೈಗಳನ್ನು ಶುಚಿಯಾಗಿಟ್ಟುಕೊಂಡು, ಶುದ್ಧ ಗಾಳಿ ಮತ್ತು ಪರಿಸರ ನೈರ್ಮಲ್ಯ ಸಂರಕ್ಷಣೆಯ ಅಭ್ಯಾಸ ಮಾಡಿಕೊಂಡರೆ ಮಾರಕ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.
ಆರ್ಥಿಕತೆಯಂತೆ ಆರೋಗ್ಯವೂ ಮುಖ್ಯವಾಗಿದೆ ಎಂದು ಹೇಳುವ ಮೂಲಕ ಮೇ 17ರವರೆಗೂ ವಿಸ್ತರಣೆಯಾಗಿರುವ ಲಾಕ್ ಡೌನ್ ಮಹತ್ವವನ್ನು ಒತ್ತಿ ಹೇಳಿದ ಸಚಿವರು, ಸರ್ಕಾರ ಸಮತೋಲನದಿಂದ ವರ್ತಿಸುತ್ತಿದೆ ಎಂದಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ ದೇಶದಲ್ಲಿ ಸೋಂಕಿತರ ಸಂಖ್ಯೆ 42, 836ರಿಂದ 46, 433ಕ್ಕೆ ಏರಿಕೆ ಆಗಿದೆ. ಒಂದೇ ದಿನ 3 ಸಾವಿರದ 597 ಪ್ರಕರಣಗಳು ಹೆಚ್ಚಾಗಿವೆ. ಸಾವಿನ ಸಂಖ್ಯೆ 1389 ರಿಂದ 1568ಕ್ಕೆ ಏರಿಕೆ ಆಗಿದೆ.
ಮಾರಕ ವೈರಸ್ ನಿಂದ ಉಂಟಾಗುವ ಹಾನಿಯನ್ನು ಜನರು ಒಮ್ಮೆ ನೆನಪಿಸಿಕೊಂಡರೆ, ಇದರ ಬಿಕ್ಕಟ್ಟು ನಿಯಂತ್ರಿಸಬಹುದಾಗಿದೆ. ಈವರೆಗೂ ಸೋಂಕು ಸಮುದಾಯದ ಹಂತ ಪ್ರವೇಶಿಸದಂತೆ ತಡೆಯುವಲ್ಲಿ ಸರ್ಕಾರ ಸಮರ್ಥವಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.
ಸಿಡುಬು, ಪೊಲಿಯೋ ಹೊರತುಪಡಿಸಿದಂತೆ ಇತರ ಸಾಂಕ್ರಾಮಿಕ ರೋಗಿಗಳು ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ ಎಂದು ಹೇಳುವ ಮೂಲಕ ಕೋವಿಡ್ -19 ಧೀರ್ಘ ಕಾಲ ದೇಶದಲ್ಲಿ ಇರುವ ಬಗ್ಗೆ ತಿಳಿಸಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಮೂಲಸೌಕರ್ಯಗಳು, ವೈದ್ಯಕೀಯ ಸಲಕರಣೆಗಳನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸ್ವದೇಶವಾಗಿಯೇ ತಯಾರಿಸಲಾಗುತ್ತಿದೆ. ಪಿಪಿಇ, ಎನ್-95 ಮಾಸ್ಕ್ ನಂತಹ ಉತ್ಪಾದನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ದೇಶದಲ್ಲಿ ಪ್ರತಿನಿತ್ಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಚೇತರಿಕೆ ಪ್ರಮಾಣದಲ್ಲಿ ಪ್ರಗತಿ ಸಾಧಿಸಲಾಗಿದೆ. ದೇಶದಲ್ಲಿ ಶೇ. 27. 40 ರಷ್ಟು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.