ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.4 ಲಕ್ಷ ದಾಟಿದ್ದು ಇರಾನ್ ನ್ನು ಹಿಂದಿಕ್ಕಿ ಭಾರತ ಅತಿ ಹೆಚ್ಚು ಸೋಂಕಿತರಿರುವ ಪ್ರದೇಶಗಳ ಪಕಿ 10 ನೇ ಸ್ಥಾನದಲ್ಲಿದೆ.
ಕೊರೋನಾ ವೈರಸ್ ಗೆ ಲಸಿಕೆ ಕಂಡುಹಿಡಿಯುವ ಕೆಲಸ ನಿರಂತರವಾಗಿ ನಡೆಯುತ್ತಿದೆಯಾದರೂ ಈವರೆಗೂ ಸ್ಪಷ್ಟ ಫಲಿತಾಂಶ ಯಾರಿಗೂ ಸಿಕ್ಕಿಲ್ಲ. ಈ ನಡುವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಯ ಮುಖ್ಯಸ್ಥ, ಪ್ರಾದೇಶಿಕ ವೈದ್ಯಕೀಯ ಸಂಶೋಧನೆಯ ನಿರ್ದೇಶಕ, ಡಾ.ರಜನಿ ಕಾಂತ್ ಮಾತನಾಡಿದ್ದು, ಕೋವಿಡ್-19 ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವುದು ಕನಿಷ್ಟ 6 ತಿಂಗಳಾಗುತ್ತದೆ ಎಂದು ಹೇಳಿದ್ದಾರೆ.
ಲಸಿಕೆಯನ್ನು ತಯಾರಿಸಲು ವೈರಸ್ ಪ್ರಭೇದಗಳನ್ನು ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳಿಸಲಾಗಿದ್ದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಗೆ ಯಶಸ್ವಿಯಾಗಿ ವರ್ಗಾವಣೆ ಮಾಡಲಾಗಿದೆ. ಈ ಪ್ರಯತ್ನಗಳ ಫಲವಾಗಿ ತಯಾರಾಗುವ ಲಸಿಕೆಯನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕನಿಷ್ಟ 6 ತಿಂಗಳು ಬೇಕಾಗುತ್ತದೆ ಎಂದು ರಜನಿಕಾಂತ್ ಹೇಳಿದ್ದಾರೆ.
ಕಳೆದ ವಾರದಿಂದ ಹೆಚ್ಚಾಗುತ್ತಿರುವ ಕೊರೋನಾ ಪ್ರಕರಣಗಳನ್ನು ಕಂಡು ಭಯಪಡಬೇಕಿಲ್ಲ. ವೃದ್ಧರು ಹಾಗೂ ಅನಾರೋಗ್ಯ ಪೀಡಿತರ ಬಗ್ಗೆ ಹೆಚ್ಚು ಗಮನ ಹರಿಸಬೇಕಿದ್ದು, ಮರಣ ಪ್ರಮಾಣವನ್ನು ಸಾಧ್ಯವಾದಷ್ಟೂ ಕಡಿಮೆ ಮಾಡುವತ್ತ ಗಮನ ಹರಿಸಬೇಕಿದೆ ಎಂದು ರಜನಿಕಾಂತ್ ತಿಳಿಸಿದ್ದಾರೆ.