ಮುಂಗೆಲಿ: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳಾ ನ್ಯಾಯಾಧೀಶರ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಲಾಗುತ್ತಿದೆ.
ಛತ್ತೀಸ್ ಘಡದ ಮುಂಗೆಲಿಯಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ 55 ವರ್ಷದ ಕಾಂತಾ ಮಾರ್ಟಿನ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರ್ಹಿ ಪ್ರದೇಶದಲ್ಲಿನ ಅವರ ಅಧಿಕೃತ ನಿವಾಸದ ಕೊಠಡಿಯಲ್ಲಿನ ಫ್ಯಾನ್ ನಲ್ಲಿ ಶವಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಮುಂಗೆಲಿ ಎಸ್ ಪಿ ಅರವಿಂದ್ ಕುಜುರ್ ಅವರು, ನ್ಯಾಯಾಧೀಶರು ಮಧ್ಯಾಹ್ನ ಬೋಜನ ಸೇವಿಸಿ ಸಂಜೆ ತಮ್ಮ ಅಡುಗೆ ಕೆಲಸಗಾರರು ಮತ್ತು ಇತರರನ್ನು ಮನೆಗೆ ಕಳುಹಿಸಿದ್ದಾರೆ. ಮಾರನೆಯ ದಿನ ಅಂದರೆ ಶನಿವಾರ ಕೆಲಸಗಾರರು ಕೆಲಸಕ್ಕೆ ಮತ್ತೆ ಜಡ್ಜ್ ನಿವಾಸಕ್ಕೆ ಆಗಮಿಸಿದಾಗ ಕೊಠಡಿಯಲ್ಲಿನ ಸೀಲಿಂಗ್ ಫ್ಯಾನ್ ನಲ್ಲಿ ಕಾಂತಾ ಮಾರ್ಟಿನ್ ಅವರ ಮೃತ ದೇಹ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇನ್ನು ಅವರ ಆಪ್ತರು ಹೇಳಿರುವಂತೆ ಕಾಂತಾ ಅವರ ಪತಿ ಇತ್ತೀಚೆಗೆ ನಿಧನರಾಗಿದ್ದರು. ಅವರ ನಿಧನದ ಬಳಿಕ ಅವರು ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಕಾಂತಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬರು ದೆಹಲಿಯಲ್ಲಿ ವಾಸಿಸುತ್ತಿದ್ದು, ಮತ್ತೊಬ್ಬರು ರಾಯ್ ಪುರದಲ್ಲಿ ವಾಸಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.