ದೇಶ

ವರವರ ರಾವ್ ರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿ: ಬಾಂಬೆ ಹೈಕೋರ್ಟ್ ಆದೇಶ

Lingaraj Badiger

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ಖ್ಯಾತ ಕವಿ ವರವರ ರಾವ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸುವಂತೆ ಬುಧವಾರ ಬಾಂಬೆ ಹೈಕೋರ್ಟ್ ಆದೇಶಿಸಿದೆ.

ಹೈಕೋರ್ಟ್ ಮಧ್ಯ ಪ್ರವೇಶಿಸಿದ ಬಳಿಕ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿರುವ ವರವರ ರಾವ್ ಅವರನ್ನು 15 ದಿನಗಳ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ದಾಖಲಿಸಲು ಒಪ್ಪಿಗೆ ಸೂಚಿಸಿದೆ.

81 ವರ್ಷದ ವರವರ ರಾವ್ ಅವರು ಸದ್ಯ ನವಿ ಮುಂಬೈನ ತಲೋಜಾ ಜೈಲಿನಲ್ಲಿದ್ದು, ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಪರ ವಕೀಲ ದೀಪಕ್ ಠಾಕ್ರೆ ಅವರು ಕೋರ್ಟ್ ಗೆ ತಿಳಿಸಿದ್ದಾರೆ.

ರಾವ್ ಅವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡದೆ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಬಾರದು ಎಂದು ಹೈಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಅಲ್ಲದೆ ಆಸ್ಪತ್ರೆಯಲ್ಲಿ ರಾವ್ ಕುಟುಂಬಸ್ಥರು ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಎಂದು ಸೂಚಿಸಿದೆ.

ವರವರ ರಾವ್ ಅವರ ಪತ್ನಿ ಹೇಮಲತಾ ಅವರು, ತಮ್ಮ ಪತಿಯ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಅವರನ್ನು ಕೂಡಲೇ ನಾನಾವತಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವರವರ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿದೆ.

SCROLL FOR NEXT