ದೇಶ

ಡಿಸೆಂಬರ್ ನಲ್ಲಿ ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ; ಹೊಸ ಕಟ್ಟಡದ ವಿಶೇಷತೆಗಳೇನು?

Sumana Upadhyaya

ನವದೆಹಲಿ: ಸಂಸತ್ತಿನ ನೂತನ ಕಟ್ಟಡ ತಲೆಯೆತ್ತಲಿದೆ. ಅದರ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಡಿಸೆಂಬರ್ ತಿಂಗಳ ಆರಂಭದಲ್ಲಿ ನೆರವೇರಿಸುವ ಸಾಧ್ಯತೆಯಿದೆ.

ನೂತನ ಸಂಸತ್ತು ಕಟ್ಟಡದ ಕಾಮಗಾರಿ ನಡೆಯಬೇಕಿರುವುದರಿಂದ ಮಹಾತ್ಮಾ ಗಾಂಧಿ, ಡಾ ಭೀಮ್ ರಾವ್ ಅಂಬೇಡ್ಕರ್ ಸೇರಿದಂತೆ 5 ಪ್ರತಿಮೆಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಿ ಅವುಗಳನ್ನು ನೂತನ ಕಟ್ಟಡದ ಕೆಲಸ ಸಂಪೂರ್ಣಗೊಂಡ ಮೇಲೆ ಪ್ರಮುಖ ಸ್ಥಳಗಳಲ್ಲಿ ಮರು ಸ್ಥಾಪನೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಈಗಿರುವ ಸಂಸತ್ತು ಕಟ್ಟಡದ ಪಕ್ಕದಲ್ಲಿಯೇ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಕೇಂದ್ರ ವಿಸ್ತಾ ಮರು ಅಭಿವೃದ್ಧಿ ಯೋಜನೆಯಡಿ ಕಾಮಗಾರಿ ನಡೆಸಿ 21 ತಿಂಗಳಲ್ಲಿ ಕಾಮಗಾರಿ ಕೆಲಸ ಪೂರ್ಣ ಮಾಡುವ ಸಾಧ್ಯತೆಯಿದೆ.

ಸೆಂಟ್ರಲ್ ವಿಸ್ತಾ ಕಂಪೆನಿ ಹೊಸ ತ್ರಿಕೋಣ ರಚನೆಯ ಸಂಸತ್ತು ಕಟ್ಟಡವನ್ನು, ಕೇಂದ್ರ ಸಚಿವಾಲಯ ಮತ್ತು 3 ಕಿಲೋ ಮೀಟರ್ ಉದ್ದದ ರಾಜ್ ಪಥ್ ರಸ್ತೆಯ ಮರು ನವೀಕರಣವನ್ನು ನಡೆಸಲಿದೆ. ರಾಜ್ ಪಥ್ ರಸ್ತೆಯ ಮರು ನವೀಕರಣ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಇರುತ್ತದೆ.

ಸಂಸತ್ತಿನ ಹೊಸ ಕಟ್ಟಡ ಕಾಮಗಾರಿ ಶಂಕುಸ್ಥಾಪನೆಗೆ ಡಿಸೆಂಬರ್ 10 ಉದ್ದೇಶಿತ ದಿನವಾದರೂ ಕೂಡ ಪ್ರಧಾನ ಮಂತ್ರಿಗಳು ಯಾವಾಗ ಲಭ್ಯರಿರುತ್ತಾರೆ ಎಂದು ನೋಡಿಕೊಂಡು ದಿನಾಂಕ ಅಂತಿಮವಾಗಲಿದೆ.

ನೂತನ ಸಂಸತ್ತು ಭವನದ ವಿಶೇಷತೆಗಳು: ಹೊಸ ಸಂಸತ್ತು ಭವನದಲ್ಲಿ ಎಲ್ಲಾ ಸಂಸದರಿಗೆ ಪ್ರತ್ಯೇಕ ಕಚೇರಿಗಳು, ಅವರಿಗೆ ಲಭ್ಯವಾಗುವಂತೆ ಇತ್ತೀಚಿನ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಕಚೇರಿಗಳಲ್ಲಿ ಅಳವಡಿಸಲಾಗುತ್ತದೆ, ಈ ಮೂಲಕ ಕಾಗದರಹಿತ ಕಚೇರಿಯನ್ನಾಗಿ ಮಾಡುವ ಯೋಜನೆ ಕೇಂದ್ರ ಸರ್ಕಾರದ್ದು. 

ಭಾರತದ ಪ್ರಜಾಪ್ರಭುತ್ವ ಪರಂಪರೆಯನ್ನು ಸಾರುವ ಭವ್ಯವಾದ ಸಂವಿಧಾನ ಸಭಾಂಗಣ, ಸಂಸದರಿಗೆ ಲಾಂಜ್, ಲೈಬ್ರೆರಿ, ಮಲ್ಟಿಪಲ್ ಕಮಿಟಿ ರೂಂ,ಡೈನಿಂಗ್ ಪ್ರದೇಶಗಳು ಮತ್ತು ಪಾರ್ಕಿಂಗ್ ಜಾಗಗಳಿರುತ್ತವೆ. 

ಕಳೆದ ಸೆಪ್ಟೆಂಬರ್ ನಲ್ಲಿ ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್ತು ಭವನವನ್ನು ನಿರ್ಮಿಸುವ ಬಿಡ್ಡಿಂಗ್ ಪ್ರಕ್ರಿಯೆಯನ್ನು ಗೆದ್ದುಕೊಂಡಿದ್ದು, 861.90 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿಕೊಡಲಿದೆ. 

ಈಗಿರುವ ಸಂಸತ್ತು ಬ್ರಿಟಿಷರ ಕಾಲದ್ದಾಗಿದ್ದು, ಎಡ್ವಿನ್ ಲುಟ್ಯಿನ್ಸ್ ಮತ್ತು ಹರ್ಬರ್ಟ್ ಬೇಕರ್ ಅವರು ವಿನ್ಯಾಸಗೊಳಿಸಿ ನಿರ್ಮಿಸಿದ್ದರು. ಇದನ್ನು ಕಟ್ಟಿದ್ದು 1921ರ ಫೆಬ್ರವರಿ 12ರಂದು ಶಂಕುಸ್ಥಾಪನೆ ನೆರವೇರಿಸಿ ಮುಂದಿನ ಆರು ವರ್ಷಗಳಲ್ಲಿ ಆಗಿನ ಕಾಲದಲ್ಲಿ 83 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಳಿಸಲಾಗಿತ್ತು. 

SCROLL FOR NEXT