ಹತ್ರಾಸ್: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾದ ದಲಿತ ಯುವತಿ ಕುಟುಂಬಸ್ಥರನ್ನು ಭೇಟಿ ಮಾಡಲು ಸೋಮವಾರ ಉತ್ತರ ಪ್ರದೇಶದ ಹತ್ರಾಸ್ ತೆರಳಿದ್ದ ಆಮ್ ಅದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ಅವರ ಮೇಲೆ ಮಸಿ ಎರಚಲಾಗಿದೆ.
ಹತ್ರಾಸ್ ಗೆ ಪಕ್ಷದ ನಿಯೋಗ ಕರೆದೊಯ್ಯುತ್ತಿದ್ದ ಸಂಜಯ್ ಸಿಂಗ್ ಮೇಲೆ ದುಷ್ಕರ್ಮಿಯೊಬ್ಬ ಮಸಿ ಎರಚಿದ್ದು, ಅದರ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಸಿಂಗ್ ಅವರು ಮಾತನಾಡುವ ವೇಳೆ, ವ್ಯಕ್ತಿಯೊಬ್ಬ ಅವರ ಬಟ್ಟೆಯ ಮೇಲೆ ಮಸಿ ಎರಚಿದ್ದು, ‘ಪಿಎಫ್‌ಐ ದಲಾಲ್ ವಾಪಸ್ ಜಾವ್’ ಎಂದು ಕೂಗಿದ್ದಾನೆ. ಘಟನೆಯ ನಂತರ ಸಿಂಗ್ ಅವರು ತಮ್ಮ ಕಾರಿನಲ್ಲಿ ಸ್ಥಳದಿಂದ ನಿರ್ಗಮಿಸಿದ್ದಾರೆ.
ಕೆಲವು ಪ್ರತಿಭಟನೆಗಳಿಗೆ ಪಿಎಫ್‌ಐ(ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಆರ್ಥಿಕ ನೆರವು ನೀಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಉತ್ತರ ಪ್ರದೇಶದ ಪೊಲೀಸರು ಕೋರಿದ್ದಾರೆ.