ದೇಶ

ಹತ್ರಾಸ್ ಪ್ರಕರಣ: ಹಿಂಸಾಚಾರ ಸೃಷ್ಠಿಸಲು ವಿದೇಶದಿಂದ 100 ಕೋಟಿ ರೂ. ಫಂಡಿಂಗ್, ಇಡಿ ಸುಳಿವು

Vishwanath S

ಲಖನೌ: ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಹತ್ರಾಸ್‌ನಲ್ಲಿ ಅಶಾಂತಿ ಮತ್ತು ಜಾತಿ ಹಿಂಸಾಚಾರವನ್ನು ಸೃಷ್ಟಿಸುವ ಯೋಜಿತ ಯೋಜನೆಗೆ ವಿದೇಶದಿಂದ 100 ಕೋಟಿ ಫಂಡಿಂಗ್ ಆಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ನಡೆಸುತ್ತಿರುವ ತನಿಖೆಯಿಂದ ತಿಳಿದುಬಂದಿದೆ.

ಮೂಲಗಳ ಪ್ರಕಾರ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ಗೆ ಸಂಬಂಧಿಸಿದ ಖಾತೆಗಳಲ್ಲಿ 100 ಕೋಟಿ ರೂ. ಹರಿದು ಬಂದಿವೆ ಎಂದು ಇಡಿ ಕಂಡುಹಿಡಿದಿದೆ. ಇದರಲ್ಲಿ 50 ಕೋಟಿ ರೂ. ಮಾರಿಷಸ್‌ನಿಂದ ಬಂದಿದೆ. ಈಗ ನಿರ್ದೇಶನಾಲಯವು ಈ ನಿಧಿಗಳ ನೈಜ ಮೂಲಗಳನ್ನು ಮತ್ತು ಅವುಗಳ ಹಿಂದಿನ ನೈಜ ಉದ್ದೇಶವನ್ನು ಮತ್ತಷ್ಟು ಪರಿಶೀಲಿಸುತ್ತಿದೆ.

ಇನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮತ್ತು ಸೈಬರ್ ಸೆಲ್ ತಂಡಕ್ಕೂ ಪ್ರಮುಖ ಸುಳಿವುಗಳು ಸಿಕ್ಕಿವೆ. ಇನ್ನು ಹಣ ವರ್ಗಾವಣೆ ಸಂಬಂಧ ಇಡಿ ಪ್ರಕರಣ ದಾಖಲಿಸಬಹುದು. ಈಗಾಗಲೇ ಬಂಧಿತ ಆರೋಪಿಗಳನ್ನು ವಿಚಾರಣೆ ಮಾಡುವುದರ ಜೊತೆಗೆ ದಾಳಿ ನಡೆಸಬಹುದು.

ಏತನ್ಮಧ್ಯೆ, ದೆಹಲಿ ಮೂಲದ ಕೇರಳ ಪತ್ರಕರ್ತ ಮತ್ತು ಪಿಎಫ್‌ಐ ಜೊತೆ ನಂಟು ಹೊಂದಿರುವ ಇತರ ಮೂವರ ವಿರುದ್ಧ ಬುಧವಾರ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ದೆಹಲಿಯಿಂದ ಹತ್ರಾಸ್‌ಗೆ ತೆರಳುತ್ತಿದ್ದಾಗ ನಾಲ್ವರನ್ನು ಸೋಮವಾರ ಮಥುರಾದಲ್ಲಿ ಬಂಧಿಸಲಾಗಿದ್ದು, ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿದೆ.

ಅಕ್ಟೋಬರ್ 5ರಂದು ಮಥುರಾದಲ್ಲಿ ಪಿಎಫ್‌ಐ ಜೊತೆ ಸಂಪರ್ಕ ಹೊಂದಿದ್ದ ನಾಲ್ವರನ್ನು ಬಂಧಿಸಲಾಗಿದ್ದು ಇವರು ದೊಡ್ಡ ಪಿತೂರಿಯ ಭಾಗವಾಗಿ ಶಾಂತಿಯನ್ನು ಭಂಗಗೊಳಿಸಲು ಹತ್ರಾಸ್‌ಗೆ ಹೋಗುತ್ತಿದ್ದರು  ಎಂದು ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

SCROLL FOR NEXT