ದೇಶ

ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.34ಕ್ಕೆ ಏರಿಕೆ!

Srinivasamurthy VN

ನವದೆಹಲಿ: ಚಿಲ್ಲರೆ ಹಣದುಬ್ಬರದಲ್ಲಿ ಮತ್ತೆ ಏರಿಕೆಯಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಶೇ.7.34ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.

ದಿನಸಿ ವಸ್ತುಗಳ ಬೆಲೆಯಲ್ಲಿನ ಗಣನೀಯ ಏರಿಕೆ ಪರಿಣಾಮದಿಂದಾಗಿ ಸೆಪ್ಟೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರ ಗಗನಕ್ಕೇರಿದ್ದು, ಶೇ.7.34ಕ್ಕೆ ಏರಿಕೆ ಕಂಡಿದೆ ಸರ್ಕಾರದ ದತ್ತಾಂಶಗಳಿಂದ ತಿಳಿದುಬಂದಿದೆ.

ಇನ್ನು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ. 6.69 ರಷ್ಟಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಈ ಪ್ರಮಾಣ ಶೇ. 3.99 ರಷ್ಟಿತ್ತು. ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ ದಿನಸಿ ವಸ್ತುಗಳ ಬೆಲೆ ಏರಿಕೆ  ಪ್ರಮಾಣ ಸೆಪ್ಟೆಂಬರ್‌ನಲ್ಲಿ ಶೇ.10.68 ರಷ್ಟಿತ್ತು. 

ಕಳೆದ ತಿಂಗಳು ಸಗಟು ದರ ಹಣದುಬ್ಬರದಲ್ಲಿ ಶೇ. 0.16ಕ್ಕೆ ಏರಿಕೆಯಾಗಿತ್ತು. ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು ಮಾರ್ಚ್‌ನಲ್ಲಿ ಶೇ 0.42ರಷ್ಟಿತ್ತು. ಆ ಬಳಿಕ ಏಪ್ರಿಲ್‌ನಿಂದ ಜುಲೈವರೆಗಿನ ನಾಲ್ಕು ತಿಂಗಳುಗಳಲ್ಲಿ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು. 2019ರ ಆಗಸ್ಟ್‌ನಲ್ಲಿ ಶೇ  1.17ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. 

ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರವನ್ನು ನಿರ್ಧರಿಸುವಾಗ ಚಿಲ್ಲರೆ ಹಣದುಬ್ಬರ ಪ್ರಮುಖ ಅಂಶವಾಗಿರಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

SCROLL FOR NEXT