ದೇಶ

ಇಂದು ಹಲವು ದೇಶಗಳಲ್ಲಿ ನಮ್ಮ ಮಲ್ಲಕಂಬ ಕ್ರೀಡೆ ಜನಪ್ರಿಯವಾಗುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

Sumana Upadhyaya

ನವದೆಹಲಿ: ಮಲ್ಲಕಂಬ, ಅಪ್ಪಟ ಭಾರತದ ದೇಶೀಯ ಸಾಂಪ್ರದಾಯಿಕ ಕ್ರೀಡೆ.  ಕೆಲ ಮೀಟರ್ ಆಳದವರೆಗೆ ಕಂಬಗಳನ್ನು ಮಣ್ಣಿನಲ್ಲಿ ಹೂತು ನಂತರ ಹೊರಗೆ ಹಲವು ಮೀಟರ್ ಎತ್ತರದವರೆಗೆ ಕಂಬವನ್ನು ಕಟ್ಟಿ ಕುಸ್ತಿ ಪಟುಗಳು ಹತ್ತಿ ಅದರಲ್ಲಿ ನಾನಾ ಕಸರತ್ತು ಮಾಡುತ್ತಾರೆ. ಹೆಸರೇ ಹೇಳುವಂತೆ ಮಲ್ಲರು ಉಪಯೋಗಿಸುವ ಕಂಬ.

ಇಂತಹ ಸಾಂಪ್ರದಾಯಿಕ ಕ್ರೀಡೆ ಮಲ್ಲಕಂಬ ಇಂದು ವಿಶ್ವಮಾನ್ಯತೆ ಪಡೆದಿದೆ. ವಿದೇಶಗಳಲ್ಲಿ ಕೂಡ ಜನಪ್ರಿಯವಾಗಿದೆ. ಪ್ರಧಾನಿ ಮೋದಿ, ಇಂದಿನ ಮನ್ ಕಿ ಬಾತ್ ನಲ್ಲಿ ಮಲ್ಲಕಂಬವನ್ನು ನೆನಪಿಸಿಕೊಂಡರು. ಇಂದು ನಮ್ಮ ಸಾಂಪ್ರದಾಯಿಕ ಕ್ರೀಡೆ ಮಲ್ಲಕಂಬ ಸಾಕಷ್ಟು ಹೊರ ದೇಶಗಳಲ್ಲಿ ಜನಪ್ರಿಯವಾಗುತ್ತಿದೆ. ಅಮೆರಿಕದಲ್ಲಿ ಚಿನ್ಮೆ ಮತ್ತು ಪ್ರಗ್ಯ ಪಟ್ನಾಕರ್ ಅವರು ತಮ್ಮ ಮನೆಯಲ್ಲಿ ಮಲ್ಲಕಂಬವನ್ನು ಕಲಿಸಲು ಆರಂಭಿಸಿದಾಗ ಅದು ಅಷ್ಟೊಂದು ಜನಪ್ರಿಯವಾಗುತ್ತದೆ ಎಂದು ಎಣಿಸಿರಲಿಲ್ಲ. ಇಂದು ಅಮೆರಿಕದಲ್ಲಿ ಮಲ್ಲಕಂಬ ತರಬೇತಿ ಕೇಂದ್ರ ಸಾಕಷ್ಟಿವೆ ಎಂದು ಹೇಳಿದರು.

ಯಾವಾಗ ನಮ್ಮ ವಸ್ತುಗಳು, ನಮ್ಮ ಆಚರಣೆ, ಸಂಪ್ರದಾಯ, ಕಲೆಗಳ ಮೇಲೆ ನಾವು ಪ್ರೀತಿ, ಅಭಿಮಾನ, ಗೌರವ ತೋರಿಸುತ್ತೇವೆಯೋ ಆಗ ಜಗತ್ತು ನಮ್ಮ ಕಡೆಗೆ ತಿರುಗಿ ನೋಡುತ್ತದೆ ಎಂಬುದಕ್ಕೆ ಈ ಮಲ್ಲಕಂಬವೇ ಸಾಕ್ಷಿ. ನಮ್ಮ ದೇಶದ ಯೋಗ, ಆಧ್ಯಾತ್ಮ, ಕಲೆ ಜಗತ್ತನ್ನು ಆಕರ್ಷಿಸಿದಂತೆ ಕ್ರೀಡೆ ಕೂಡ ಬೇರೆ ದೇಶಗಳ ನಾಗರಿಕರ ಗಮನ ಸೆಳೆಯುತ್ತಿದೆ. ಜರ್ಮನಿ, ಪೋಲೆಂಡ್, ಮಲೇಷ್ಯಾ ಸೇರಿ 20 ದೇಶಗಳಲ್ಲಿ ಮಲ್ಲಕಂಬ ಜನಪ್ರಿಯವಾಗುತ್ತಿದೆ. ಇದರ ವಿಶ್ವ ಚಾಂಪಿಯನ್ ಕೂಡ ಆರಂಭವಾಗಿದೆ ಎಂದರು.

SCROLL FOR NEXT