ದೇಶ

ನೂತನ ಶಿಕ್ಷಣ ನೀತಿ-2020ನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ:ಪ್ರಧಾನಿ ಮೋದಿ

Sumana Upadhyaya

ನವದೆಹಲಿ:ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಧ್ಯಯನಕ್ಕಿಂತ ಮಕ್ಕಳ ಕಲಿಕೆಗೆ ಹೆಚ್ಚು ಆದ್ಯತೆ ನೀಡುತ್ತದೆ. ದೇಶದ ಜನರ ಆಶೋತ್ತರಗಳನ್ನು ಈಡೇರಿಸಲು ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ಪ್ರಮುಖ ಸಾಧನಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ರಾಷ್ಟ್ರೀಯ ಶಿಕ್ಷಣ ನೀತಿಯ ಗವರ್ನರ್ ಸಮ್ಮೇಳನದ ವರ್ಚುವಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ಕೇಂದ್ರ ಸರ್ಕಾರದವರೆಗೆ ಎಲ್ಲರೂ ಜವಾಬ್ದಾರರಾಗಿರುತ್ತಾರೆ. ಆದರೆ ಶಿಕ್ಷಣ ನೀತಿಯಲ್ಲಿ ಸರ್ಕಾರದ ಮಧ್ಯ ಪ್ರವೇಶ, ಅದರ ಪರಿಣಾಮ ಯಾವತ್ತಿಗೂ ಸೀಮಿತವಾಗಿರಬೇಕು. ನೂತನ ಶಿಕ್ಷಣ ನೀತಿಯನ್ನು ಉತ್ಸಾಹ, ಶ್ರದ್ಧೆಯಿಂದ ಪರಿಣಾಮಕಾರಿಯಾಗಿ ಜಾರಿಗೊಳಿಸುವುದು ಇದಕ್ಕೆ ಸಂಬಂಧಪಟ್ಟವರೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ನಮ್ಮ ಯುವಜನತೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ತಮ್ಮ ಆಸಕ್ತಿಯ ವಿಷಯಗಳನ್ನು ಕಲಿಯಬಹುದಾಗಿದೆ. ಈ ಹಿಂದೆ ವಿದ್ಯಾರ್ಥಿಗಳು ತಮ್ಮ ಆಲೋಚನೆ, ಆಶೋತ್ತರಗಳಿಗೆ ಹೊರತಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಕಲಿಯಬೇಕಾಗುತ್ತಿತ್ತು, ಒಂದು ಕೋರ್ಸ್ ಗೆ ಸೇರಿಕೊಂಡ ನಂತರ ಅವರಿಗೆ ನಾನು ತೆಗೆದುಕೊಂಡ ವಿಷಯ ನನ್ನ ಆಸಕ್ತಿಗೆ ಪೂರಕವಾಗಿಲ್ಲ ಎಂದು ನಂತರ ಅವರಿಗೆ ಅರ್ಥವಾಗುತ್ತಿತ್ತು, ಇನ್ನು ಮುಂದೆ ಆ ಸಮಸ್ಯೆಯಿರುವುದಿಲ್ಲ, ಹೊಸ ಶಿಕ್ಷಣ ನೀತಿಯಲ್ಲಿ ಅದಕ್ಕೆ ಆದ್ಯತೆ ನೀಡಲಾಗಿದೆ ಎಂದರು.

ಆರಂಭದ ಹಂತದಿಂದಲೇ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೇಳಬಹುದಾಗಿರುವುದರಿಂದ ಮುಂದೆ ಕಾಲೇಜು ಹಂತಕ್ಕೆ, ನಂತರ ಕಲಿಕೆ ಮುಗಿದ ಮೇಲೆ ಬದುಕಿನಲ್ಲಿ ಉತ್ತಮವಾಗಿ ತಯಾರಾಗುತ್ತಾರೆ. ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಎದುರಿಸಲು ಸಮರ್ಥರಾಗಿ ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರಾಯೋಗಿಕ ಕಲಿಕೆ ಹೆಚ್ಚಾಗುತ್ತದೆ ಎಂದರು.

ದೇಶದಲ್ಲಿ ರಕ್ಷಣಾ ನೀತಿ, ವಿದೇಶಾಂಗ ನೀತಿ ಇರುವಂತೆ ಶಿಕ್ಷಣ ನೀತಿ ಕೂಡ ದೇಶಕ್ಕಾಗಿ ಇರುವುದೇ ಹೊರತು ಸರ್ಕಾರಕ್ಕಲ್ಲ, ಶಿಕ್ಷಣ ನೀತಿಯಲ್ಲಿ ಹೆಚ್ಚೆಚ್ಚು ಶಿಕ್ಷಕರು ಮತ್ತು ಪೋಷಕರು ಒಳಗೊಂಡಿರುತ್ತಾರೆ. ಹೆಚ್ಚು ವಿದ್ಯಾರ್ಥಿಗಳು ಸಂಬಂಧ, ಸಂಪರ್ಕ ಹೊಂದಿರುತ್ತಾರೆ, ಅವರ ಪ್ರಸ್ತುತತೆ, ಆದ್ಯತೆ, ವಿಸ್ತಾರವೇ ಮುಖ್ಯವಾಗುತ್ತದೆ ಎಂದರು.ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೊಸ ಶಿಕ್ಷಣ ನೀತಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಹೇಳಿದರು.

ಭಾರತ ಅನಾದಿ ಕಾಲದಿಂದಲೂ ಕಲಿಕೆಯ ಕೇಂದ್ರವಾಗಿದೆ, 21ನೇ ಶತಮಾನದಲ್ಲಿ ನಮ್ಮ ದೇಶವನ್ನು ಜ್ಞಾನದ ಆರ್ಥಿಕತೆಯ ದೇಶವನ್ನಾಗಿ ಮಾಡಲು ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದರು.

ಸಮ್ಮೇಳನಕ್ಕೆ ಉನ್ನತ ಶಿಕ್ಷಣದ ರೂಪಾಂತರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಪಾತ್ರ ಎಂದು ಶೀರ್ಷಿಕೆ ಇಡಲಾಗಿದ್ದು, ಶಿಕ್ಷಣ ಸಚಿವಾಲಯ ಇದನ್ನು ಆಯೋಜಿಸಿದೆ. ಎಲ್ಲಾ ರಾಜ್ಯಗಳ ಶಿಕ್ಷಣ ಸಚಿವರುಗಳು, ರಾಜ್ಯಗಳ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಇತರ ಹಿರಿಯ ನಾಯಕರು ಭಾಗವಹಿಸಿದ್ದಾರೆ.

ನಮ್ಮ ದೇಶದಲ್ಲಿ ಹಿಂದಿನ ಶಿಕ್ಷಣ ನೀತಿ ಜಾರಿಗೆ ಬಂದಿದ್ದು 1986ರಲ್ಲಿ. ಅದಾದ ಬಳಿಕ 34 ವರ್ಷಗಳ ನಂತರ 21ನೇ ಶತಮಾನದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020ನ್ನು ಜಾರಿಗೆ ತರಲಾಗುತ್ತಿದೆ. 1986ರಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ ನಂತರ ವಿದ್ಯಾರ್ಥಿಗಳು ನಿಗದಿತ ವಿಷಯಗಳನ್ನು ಕಲಿಯಬೇಕು ಎಂಬ ಒತ್ತಡವನ್ನು ತೆಗೆದುಹಾಕಲಾಯಿತು.

SCROLL FOR NEXT