ದೇಶ

ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು!: ಬಿಜೆಪಿಯಿಂದ ದ್ರೋಹದ ಆರೋಪ! 

Srinivas Rao BV

ಮಣಿಪುರ: ಮಣಿಪುರದಲ್ಲಿ ಬಿಜೆಪಿ-ಎನ್ ಪಿಪಿ ಮೈತ್ರಿ ನಡುವೆ ಬಿರುಕು ಮೂಡಿರುವಂತೆ ಕಾಣುತ್ತಿದೆ. 

ಬಿಜೆಪಿ ಸರ್ಕಾರದಲ್ಲಿ ತನ್ನ ಪಕ್ಷದ ನಾಲ್ವರು ಸಚಿವರ ಪೈಕಿ ಇಬ್ಬರನ್ನು ಕೈಬಿಟ್ಟಿರುವುದನ್ನು ದ್ರೋಹ ಎಂದು ಎನ್ ಪಿಪಿ ಹೇಳಿದೆ. 

ಗುವಾಹಟಿಯಲ್ಲಿರುವ ನಾಲ್ವರು ಎನ್ ಪಿಪಿ ಶಾಸಕರು ಸಭೆ ನಡೆಸಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾನುವಾರ ಸಂಜೆ ಮತ್ತೊಂದು ಸುತ್ತಿನ ಸಭೆಯ ಬಳಿಕ ಬಿಜೆಪಿ ಜೊತೆಗಿನ ಎನ್ ಪಿಪಿ ಮೈತ್ರಿ ಮುಂದುವರಿಯಬೇಕೋ ಬೇಡವೋ ಎಂಬ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಲಾಗುತ್ತಿದೆ. 

ನಮಗೆ ಅಸಮಾಧಾನ ಉಂಟಾಗಿದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ನಮಗೆ ಭರವಸೆ ನೀಡಿದ್ದರು, ಆದರೆ ಈಗ ಅದು ಈಡೇರಿಕೆಯಾಗಿಲ್ಲ. ನಮಗೆ ದ್ರೋಹವಾಗಿದೆ ಎಂದು ಎನ್ ಪಿಪಿ ಶಾಸಕರೊಬ್ಬರು ಹೇಳಿದ್ದಾರೆ. 

ನಾಲ್ವರು ಶಾಸಕರು ಉಪಮುಖ್ಯಮಂತ್ರಿ ವೈ ಜೋಯ್ ಕುಮಾರ್ ಸಿಂಗ್, ಸಚಿವ ಲೆಟ್ಪೌ ಹೌಕಿಪ್, ಸಂಪುಟದಿಂದ ಕೈಬಿಡಲಾದ ಎಲ್ ಜಯಂತಕುಮಾರ್, ಎನ್ ಕಯಿಸಿ ಗುವಾಹಟಿಯಲ್ಲಿದ್ದಾರೆ. 

ಗುರುವಾರದಂದು ಮಣಿಪುರದ ಬಿಜೆಪಿ ನೇತೃತ್ವದ ಸಿಎಂ ಎನ್ ಬಿರೇನ್ ಸಿಂಗ್ ಸಚಿವ ಸಂಪುಟ ಪುನಾರಚನೆಯಲ್ಲಿ ಮೂವರು ಬಿಜೆಪಿ ಸಚಿವರೂ ಸೇರಿ ಒಟ್ಟು 6 ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದರು.

SCROLL FOR NEXT