ದೇಶ

ಖಾಸಗಿ ಮಾರುಕಟ್ಟೆಗೆ ಕೋವಿಡ್-19 ಲಸಿಕೆ: ಪ್ರತೀ ಡೋಸ್ ಗೆ 1000 ರೂ ದರ ನಿಗದಿ ಸಾಧ್ಯತೆ!

Srinivasamurthy VN

ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ದಿಢೀರ್ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಲಸಿಕೆ ವಿತರಣೆಯ ವೇಗವನ್ನು ಹೆಚ್ಚಿಸುವ ಸಂಬಂಧ ಕ್ರಮಗಳ ಕುರಿತು ಆಲೋಚಿಸುತ್ತಿರುವ ಕೇಂದ್ರ ಸರ್ಕಾರ ಖಾಸಗಿ ಮಾರುಕಟ್ಟೆಗೆ ಕೋವಿಡ್ ಲಸಿಕೆ ಬಿಡುಗಡೆ ಮಾಡಲು ಗಂಭೀರ ಚಿಂತನೆಯಲ್ಲಿ  ತೊಡಗಿದೆ.

ಹೌದು.. ದೇಶಾದ್ಯಂತ ಕೋವಿಡ್ ಸೋಂಕಿತರ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಖಾಸಗಿ ವಲಯದಲ್ಲೂ ಕೋವಿಡ್ ಲಸಿಕೆ ದೊರೆಯುವಂತೆ ಮಾಡುವ ಮೂಲಕ ಕೇಂದ್ರ ಸರ್ಕಾರ ಲಸಿಕೆ ವಿತರಣಾ ವೇಗವನ್ನು ಹೆಚ್ಚಳ ಮಾಡಲು ಯೋಜಿಸಿದೆ. ಅದರಂತೆ ಖಾಸಗಿ ಮಾರುಕಟ್ಟೆಯ ಕೋವಿಡ್ ಲಸಿಕೆಗಳಿಗೆ ದರ ನಿಗದಿ  ಮಾಡಲು ಮುಂದಾಗಿದ್ದು, ಪ್ರತೀ ಡೋಸ್ ಗೆ 900 ರೂಯಿಂದ 1 ಸಾವಿರ ರೂ ದರ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದು ಗರಿಷ್ಠ ಚಿಲ್ಲರೆ ದರವಾಗಿರಲಿದೆ ಎಂದು ಹೇಳಲಾಗಿದೆ.

ಅಂತೆಯೇ ಲಸಿಕೆ ತಯಾರಕರು ಪ್ರತೀ ಡೋಸ್ ಗೆ ಸುಮಾರು 650 ರೂ ದರ ನಿಗದಿ ಮಾಡುವ ಸಾಧ್ಯತೆ ಇದೆ ಎಂದೂ ಹೇಳಲಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಆದೇಶ ಹೊರಡಿಸಿದ್ದು, ಅದರಂತೆ ಲಸಿಕೆಗೆ ಬೇಡಿಕೆ  ಹೆಚ್ಚಾಗುವ ಸಾಧ್ಯತೆ ಇದೆ. ಪ್ರಸ್ತುತ ದೇಶದಲ್ಲಿ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದರಿಂದಲೂ ಕೋವಿಡ್ ಲಸಿಕೆಗಳನ್ನು ಹಾಕಿಸಿಕೊಳ್ಳುವವರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಲಸಿಕೆ ತಯಾರಕರು ಲಸಿಕೆ ಉತ್ಪಾದನೆಯನ್ನು ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ. 

ಅದರಂತೆ ಜೂನ್ ತಿಂಗಳ ಹೊತ್ತಿಗೆ ದೇಶದಲ್ಲಿನ ಲಸಿಕೆ ಲಭ್ಯತೆ ಹೆಚ್ಚಳವಾಗುವ ಸಾಧ್ಯತೆ ಇದೆ. ಜೂನ್ ವೇಳೆಗೆ ಭಾರತದಲ್ಲಿ ಕೋವಿಡ್ ಲಸಿಕೆ ಪೂರೈಕೆ 200 ಮಿಲಿಯನ್ ಡೋಸ್ ವರೆಗೆ ಹೆಚ್ಚಾಗುವ ನಿರೀಕ್ಷೆಯಿದ್ದು, ಇದು ಪ್ರಸ್ತುತ 70 ಮಿಲಿಯನ್‌ ಡೋಸ್ ಲಸಿಕೆ ಉತ್ಪಾದನೆ ಮಾಡಲಾಗುತ್ತಿದೆ. ಎಸ್‌ಐಐ  ಮತ್ತು ಭಾರತ್ ಬಯೋಟೆಕ್ ಉತ್ಪಾದನೆ ಹೆಚ್ಚಳ ಮಾಡಲಿವೆ. ಅಂತೆಯೇ ರಷ್ಟಾದ ಸ್ಪುಟ್ನಿಕ್ ವಿ ಲಸಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ. ಆಮದನ್ನು ಗಣನೆಗೆ ತೆಗೆದುಕೊಳ್ಳುತ್ತದೆ.

ಇನ್ನು ನಿನ್ನೆ ಸಂಜೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಅವರು ನಡೆಸಿದ ಸಭೆಯಲ್ಲೂ ಲಸಿಕೆ ವಿತರಣಾ ವೇಗವನ್ನು ಹೆಚ್ಚಿಸುವ ಸಂಬಂಧ ಗಂಭೀರ ಚರ್ಚೆ ನಡೆಸಲಾಗಿದೆ. ಅಲ್ಲದೆ ಲಸಿಕೆ ಉತ್ಪಾದಕರಿಗೂ ಲಸಿಕೆ ತಯಾರಿಕಾ ಪ್ರಮಾಣ ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ.

SCROLL FOR NEXT