ದೇಶ

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ನಾಲ್ವರು ರೋಗಿಗಳ ಸಾವು 

Sumana Upadhyaya

ಥಾಣೆ(ಮಹಾರಾಷ್ಟ್ರ): ಆಸ್ಪತ್ರೆಗಳಲ್ಲಿ ಬೆಂಕಿ ದುರಂತ ಪ್ರಕರಣ ಮುಂದುವರಿಯುತ್ತಲೇ ಇದೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾದಲ್ಲಿರುವ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ಬುಧವಾರ ನಸುಕಿನ ಜಾವ ಬೆಂಕಿ ದುರಂತ ಸಂಭವಿಸಿ ನಾಲ್ವರು ರೋಗಿಗಳು ದಹನವಾಗಿದ್ದಾರೆ.

ಇಂದು ನಸುಕಿನ ಜಾವ 3.40ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಲಾರಂಭಿಸಿದ್ದು, ಮುಂಬ್ರಾದ ಕೌಸಾ ಪ್ರದೇಶದಲ್ಲಿ ಈ ಪ್ರೈಮ್ ಕ್ರಿಟಿಕೇರ್ ಆಸ್ಪತ್ರೆಯಿದೆ. ಇದು ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯಾಗಿದ್ದು ಇಲ್ಲಿ ಸುಮಾರು 20 ರೋಗಿಗಳು ಇಂದು ದುರ್ಘಟನೆ ನಡೆಯುವ ಸಂದರ್ಭದಲ್ಲಿ ದಾಖಲಾಗಿದ್ದರು.

ತಕ್ಷಣವೇ ಬೇರೆ ಆಸ್ಪತ್ರೆಗೆ ರೋಗಿಗಳನ್ನು ಸಾಗಿಸುವಾಗ ನಾಲ್ವರು ಮೃತಪಟ್ಟಿದ್ದಾರೆ ಎಂದು ಥಾಣೆ ನಗರ ಪಾಲಿಕೆ ತಿಳಿಸಿದೆ. ಸದ್ಯ ಎರಡು ಅಗ್ನಿಶಾಮಕ ವಾಹನಗಳು ಮತ್ತು ಇತರ ರಕ್ಷಣಾ ವಾಹನಗಳು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಮತ್ತು ರೋಗಿಗಳನ್ನು ಕಾಪಾಡುವ ಕೆಲಸ ಮುಂದುವರಿದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಆಸ್ಪತ್ರೆಯ ವಿದ್ಯುತ್ ಮೀಟರ್ ಕೋಣೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡು ನಂತರ ತಕ್ಷಣವೇ ಇತರ ಪ್ರದೇಶಗಳಿಗೆ ತನ್ನ ಕೆನ್ನಾಲಿಗೆಯನ್ನು ವ್ಯಾಪಿಸಿತು.

ಮುಂಬ್ರಾ-ಕಲ್ವಾ ಶಾಸಕ ಜಿತೇಂದ್ರ ಅವ್ಹಾಡ್ ಕೂಡಲೇ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದರು, ತಕ್ಷಣಕ್ಕೆ ಆಗಬೇಕಾದ ರಕ್ಷಣಾ ಕಾರ್ಯಕ್ಕೆ ಕಾರ್ಯಪ್ರವೃತ್ತರಾದರು. ಸದ್ಯ ಬೆಂಕಿಯನ್ನು ನಂದಿಸಲಾಗಿದ್ದು ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದರು.

ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರಿಗೆ ಘಟನೆ ಬಗ್ಗೆ ವಿವರ ನೀಡಲಾಗಿದೆ. ಮೃತ ರೋಗಿಗಳ ಕುಟುಂಬದವರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಗಾಯಗೊಂಡವರಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ದುರ್ಘಟನೆಯಲ್ಲಿ ನಾಲ್ವರು ರೋಗಿಗಳು ಮೃತಪಟ್ಟಿದ್ದು ಶವಪರೀಕ್ಷೆ ನಂತರ ನಿಖರ ಕಾರಣ ಗೊತ್ತಾಗಲಿದೆ. ಪೊಲೀಸರು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಮಧುಕರ್ ಶಿವಾಜಿ ಕಡ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. 

ಮೊನ್ನೆ ಏಪ್ರಿಲ್ 23ರಂದು ವಿರಾರ್ ನ ಖಾಸಗಿ ಆಸ್ಪತ್ರೆಯ ಐಸಿಯು ಘಟಕದಲ್ಲಿ 15 ಮಂದಿ ಕೊರೋನಾ ರೋಗಿಗಳು ಮೃತಪಟ್ಟಿದ್ದರು.

Today at around 03:40 am fire broke out at Prime Criticare Hospital in Mumbra, Thane. Two fire engines & one rescue vehicle are at the spot. Fire extinguishing underway. Four dead during shifting of patients to another hospital: Thane Municipal Corporation#Maharashtra pic.twitter.com/QR4NNYZd8Y

SCROLL FOR NEXT