ದೇಶ

ಜಾರ್ಖಂಡ್: ಲಾಕ್ ಡೌನ್ ನಿಯಮ ಉಲ್ಲಂಘನೆಗಾಗಿ ಪೊಲೀಸರಿಂದ ಥಳಿತ, ವ್ಯಕ್ತಿ ಸಾವು

Nagaraja AB

ರಾಂಚಿ: ಲಾಕ್ ಡೌನ್ ನಿಯಮ ಉಲ್ಲಂಘನೆಗಾಗಿ ಪೊಲೀಸರಿಂದ ಥಳಿತಕ್ಕೊಳಗಾದ 50 ವರ್ಷದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹಜಾರಿಬಾಗ್ ನ ಚೌಪರನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಚಕ್ಕನ್ ಭೂಯಾನ್ ತನ್ನ ಹೆಂಡತಿ ಹಾಗೂ ಸಹೋದರನೊಂದಿಗೆ ಹಳ್ಳಿಯೊಂದರಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವಾಗ ಮಾರ್ಗ ಮಧ್ಯೆ ಪೆಟ್ರೋಲ್ ಹಾಕಿಸಲು ಬೈಕ್ ನಿಲ್ಲಿಸಲಾಗಿದೆ.

ತಕ್ಷಣ ಅಲ್ಲಿಗೆ ಬಂದ  ಗಸ್ತುವಾಹನದಲ್ಲಿದ್ದ ಪೊಲೀಸರು ಲಾಠಿಯಿಂದ ಥಳಿಸಲು ಪ್ರಾರಂಭಿಸಿದ್ದಾರೆ. ಹೇಗೂ ಆತನ ಹೆಂಡತಿ ಹಾಗೂ ಸಹೋದರ ಅಲ್ಲಿಂದ ಓಡಿಹೋಗಿದ್ದಾರೆ. ಆದರೆ, ಬೈಕ್ ಮೇಲೆಯೇ ಕುಳಿತಿದ್ದ ಚಕ್ಕನ್  ಭೂಯಾನ್ ಮೇಲೆ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ.
 
ಸಹೋದರ ಪ್ರಜ್ಞೆ ತಪ್ಪಿದಾಗ ಸುತ್ತಮುತ್ತಲಿನ ಜನರು ದೌಡಾಯಿಸಿ, ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ, ಮಾರ್ಗ ಮಧ್ಯದಲ್ಲಿಯೇ ಆತ ಸಾವನ್ನಪ್ಪಿದ್ದಾಗಿ ಶಂಕರ್ ಭೂಯಾನ್ ತಿಳಿಸಿದ್ದಾನೆ. ತದನಂತರ ಘಟನೆ ಖಂಡಿಸಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ, ಪೊಲೀಸರ ಅಮಾನತಿಗೆ ಆಗ್ರಹಿಸಲಾಯಿತು.ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ಡಿಎಸ್ ಪಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಗಿದೆ.

ಆದಾಗ್ಯೂ, ಇಂತಹ ಯಾವುದೇ ಘಟನೆ ಆಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಬಂದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಚೌಪರನ್ ಪೊಲೀಸ್ ಠಾಣಾಧಿಕಾರಿ ವಿನೋದ್ ಟಿರ್ಕಿ ಹೇಳಿದ್ದಾರೆ.

SCROLL FOR NEXT