ದೇಶ

ಸೆರಂನ ಮತ್ತೊಂದು ಕೋವಿಡ್ ಲಸಿಕೆ ಕೋವೊವ್ಯಾಕ್ಸ್ ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆ: ಆದಾರ್ ಪೂನಾವಾಲ

Lingaraj Badiger

ನವದೆಹಲಿ: ಭಾರತದಲ್ಲಿ ತಮ್ಮ ಕಂಪನಿ ತಯಾರಿಸುತ್ತಿರುವ ಮತ್ತೊಂದು ಕೋವಿಡ್ -19 ಲಸಿಕೆ ಕೋವೊವ್ಯಾಕ್ಸ್ ಅನ್ನು ವಯಸ್ಕರಿಗಾಗಿ ಅಕ್ಟೋಬರ್ ನಲ್ಲಿ ಮತ್ತು 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗಾಗಿ ಬಿಡುಗಡೆ ಮಾಡುವ ವಿಶ್ವಾಸವಿದೆ  ಎಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದಾರ್ ಪೂನಾವಾಲ ಅವರು ಶುಕ್ರವಾರ ಹೇಳಿದ್ದಾರೆ.

ಸೆರಂ ಇನ್‌ಸ್ಟಿಟ್ಯೂಟ್‌ಗೆ ಎಲ್ಲಾ ರೀತಿಯ ಬೆಂಬಲ ನೀಡಿದ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದ ಪೂನಾವಾಲ ಅವರು, ಬೇಡಿಕೆಯನ್ನು ಪೂರೈಸಲು ಕಂಪನಿಯು ತನ್ನ ಕೋವಿಶೀಲ್ಡ್ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಲು ಯಾವಾಗಲೂ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಪೂನಾವಾಲಾ ಅವರು ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಸತ್ತಿನಲ್ಲಿ ಭೇಟಿ ಮಾಡಿ ಸುಮಾರು 30 ನಿಮಿಷಗಳ ಕಾಲ ಮಾತುಕತೆ ನಡೆಸಿದರು. 

"ಸರ್ಕಾರವು ನಮಗೆ ಸಹಾಯ ಮಾಡುತ್ತಿದೆ ಮತ್ತು ನಾವು ಯಾವುದೇ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿಲ್ಲ. ಎಲ್ಲಾ ಸಹಕಾರ ಮತ್ತು ಬೆಂಬಲಕ್ಕಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞರಾಗಿರುತ್ತೇವೆ" ಎಂದು ಪೂನಾವಾಲಾ ಅವರು ಅಮಿತ್ ಶಾ ಭೇಟಿಯ ನಂತರ ಪಿಟಿಐಗೆ ತಿಳಿಸಿದ್ದಾರೆ.

ಮಕ್ಕಳಿಗಾಗಿ ಲಸಿಕೆ ಬಗ್ಗೆ ಕೇಳಿದಾಗ, "ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆಯನ್ನು ಮುಂದಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಂದರೆ  ಜನವರಿ-ಫೆಬ್ರವರಿಯಲ್ಲಿ ಆರಂಭಿಸಲಾಗುವುದು" ಎಂದು ಹೇಳಿದರು. 

ಇನ್ನೂ ಡಿಸಿಜಿಐ ಅನುಮೋದನೆಗಳನ್ನು ಅವಲಂಬಿಸಿ ವಯಸ್ಕರಿಗೆ ಕೋವೊವ್ಯಾಕ್ಸ್ ಅನ್ನು ಅಕ್ಟೋಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಪೂನಾವಾಲಾ ತಿಳಿಸಿದರು.

ಅಮೆರಿಕ ಮೂಲದ ನೋವಾವ್ಯಾಕ್ಸ್ ಕಂಪನಿ ಕೋವೊವ್ಯಾಕ್ಸ್ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯ ಉತ್ಪಾದನೆಗೆ ಸೆರಂ ಸಂಸ್ಥೆ ಕಳೆದ ವರ್ಷ ಆಗಸ್ಟ್ ನಲ್ಲಿ ಪರವಾನಗಿ ಪಡೆದಿದೆ.

SCROLL FOR NEXT