ದೇಶ

ಬಾಕಿ ಶುಲ್ಕ ಕೇಳದೆ ವರ್ಗಾವಣೆ ಪ್ರಮಾಣಪತ್ರಗಳನ್ನು ನೀಡಿ: ಖಾಸಗಿ ಶಾಲೆಗಳಿಗೆ ಮದ್ರಾಸ್ ಹೈಕೋರ್ಟ್ ಆದೇಶ

Lingaraj Badiger

ಚೆನ್ನೈ: ಅರ್ಜಿಗಳನ್ನು ಸ್ವೀಕರಿಸಿದ ಒಂದು ವಾರದೊಳಗೆ ಬಾಕಿ ಇರುವ ಶುಲ್ಕ ಪಾವತಿಗೆ ಒತ್ತಾಯಿಸದೆ ವರ್ಗಾವಣೆ ಪ್ರಮಾಣಪತ್ರಗಳನ್ನು(ಟಿಸಿ) ನೀಡುವಂತೆ ಮದ್ರಾಸ್ ಹೈಕೋರ್ಟ್ ಶನಿವಾರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.

ಈ ಹಿಂದೆ ಅಧ್ಯಯನ ಮಾಡಿದ ಶಾಲೆಗಳಿಂದ ಟಿಸಿಗಳನ್ನು ಪಡೆಯದೆ ಮತ್ತೊಂದು ಶಾಲೆಯಲ್ಲಿ ಪ್ರವೇಶ ನೀಡವುದನ್ನು ನಿರ್ಬಂಧಿಸಬೇಕು ಎಂದು ಕೋರಿ 250ಕ್ಕೂ ಹೆಚ್ಚು ಶಾಲೆಗಳ ಯುನೈಟೆಡ್ ಡಿಸ್ಟ್ರಿಕ್ಟ್ ಸೆಲ್ಫ್ ಫೈನಾನ್ಸಿಂಗ್ ಸ್ಕೂಲ್ ಅಸೋಸಿಯೇಷನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಈ ಆದೇಶ ನೀಡಿದೆ.

ಚಾಲ್ತಿಯಲ್ಲಿರುವ ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ, ವರ್ಗಾವಣೆ ಪ್ರಮಾಣಪತ್ರಗಳ ಕೊರತೆಯಿಂದಾಗಿ ಮಕ್ಕಳು ತಮ್ಮ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸದಂತೆ ನೋಡಿಕೊಳ್ಳಬೇಕೆಂದು ರಾಜ್ಯ ಸರ್ಕಾರ ಈ ಸಂಬಂಧ ಅಫಿಡವಿಟ್ ಸಲ್ಲಿಸಿತ್ತು.

"ವಿದ್ಯಾರ್ಥಿಯ ವರ್ಗಾವಣೆಯು ನಿಯಮಾವಳಿಗಳಿಂದ ನಿಯಂತ್ರಿಸಲ್ಪಡುವುದು ನಿಜ. ಆದರೆ, ಒಂದು ಅಸಾಮಾನ್ಯ ಪರಿಸ್ಥಿತಿ ಉಂಟಾದಾಗ, ವ್ಯವಹಾರಗಳನ್ನು ನಿರ್ವಹಿಸಲು ಮತ್ತು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಕೆಲವು ಅಧಿಕಾರ ನೀಡಬೇಕಾಗುತ್ತದೆ. ಇಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ಆಸಕ್ತಿ ಮುಖ್ಯ" ಎಂದು 
ನ್ಯಾಯಮೂರ್ತಿ ಆನಂದ ವೆಂಕಟೇಶ್ ಅವರು ಹೇಳಿದ್ದಾರೆ.

"ಬೇರೆ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಲು ಬಯಸುವ ಯಾವುದೇ ವಿದ್ಯಾರ್ಥಿ ಅಥವಾ ಪೋಷಕರು ಸಂಬಂಧಿತ ಶಾಲೆಗೆ ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ವಿದ್ಯಾರ್ಥಿ ಅಥವಾ ಪೋಷಕರು ಸಲ್ಲಿಸಿದ ತಕ್ಷಣ, ವರ್ಗಾವಣೆ ಪ್ರಮಾಣಪತ್ರ ನೀಡುವ ಶಾಲೆಯು ಅರ್ಜಿ ಸ್ವೀಕರಿಸಿದ ದಿನಾಂಕದಿಂದ ಒಂದು ವಾರದ ಅವಧಿಯಲ್ಲಿ ವರ್ಗಾವಣೆ ಪ್ರಮಾಣಪತ್ರವನ್ನು ನೀಡಬೇಕು ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

SCROLL FOR NEXT