ದೇಶ

ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಬಳಿ ಇನ್ನೂ 2.25 ಕೋಟಿ ಡೋಸ್ ಕೋವಿಡ್ ಲಸಿಕೆ ಇದೆ: ಕೇಂದ್ರ ಸರ್ಕಾರ

Manjula VN

ನವದೆಹಲಿ: ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ 2.25 ಕೋಟಿಗೂ ಹೆಚ್ಚು ಡೋಸ್ ಕೋವಿಡ್-19 ಲಸಿಕೆಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. 

ಈವರೆಗೆ ಕೇಂದ್ರವು ರಾಜ್ಯಗಳಿಗೆ 56,81,32,750 ಕೋಟಿ ಪ್ರಮಾಣದಷ್ಟು ಲಸಿಕೆ ಪೂರೈಸಿದ್ದು, ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಳಕೆಯಾಗದ ಒಟ್ಟು 2,25,52,523 ಡೋಸ್ ಕೋವಿಡ್ ಲಸಿಕೆಗಳಿವೆ ಎಂದು ಹೇಳಿದೆ.

ಕೇಂದ್ರದ ಮಾಹಿತಿಯ ಪ್ರಕಾರ, ತ್ಯಾಜ್ಯ ಸೇರಿದಂತೆ ಒಟ್ಟು 55,11,51,992 ಪ್ರಮಾಣದಷ್ಟು ಲಸಿಕೆಗಳು ಬಳಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ 1,09,32,960 ಡೋಸ್ ಲಸಿಕೆಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದೆ. 

ಭಾರತದಲ್ಲಿ ಜನವರಿ 16ರಂದು ಸ್ವದೇಶಿ ನಿರ್ಮಿತ ಕೋವಿಶೀಲ್ಟ್ ಮತ್ತು ಕೋವ್ಯಾಕ್ಸಿನ್ ಕೊರೋನಾ ಲಸಿಕೆಗೆ ಪ್ರಧಾನಿ ಮೋದಿಯವರು ಚಾಲನೆ ನೀಡಿದ್ದು, ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೋನಾ ವಾರಿಯರ್ಸ್'ಗೆ ಲಸಿಕೆಯ ಮೊದಲ ಆದ್ಯತೆಯನ್ನು ನೀಡಲಾಗಿತ್ತು. ಬಳಿಕ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರಿಗೆ ಲಸಿಕೆ ನೀಡಲಾಗಿತ್ತು. ಮೇ 1ರಿಂದ 18-45 ವರ್ಷ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ.

ಕೇಂದ್ರ ಸರ್ಕಾರ ಮಾಹಿತಿ ನೀಡಿರುವ ಪ್ರಕಾರ ಲಸಿಕೆ ಅಭಿಯಾನ ಆರಂಭವಾಗಿ ಇಲ್ಲಿಯವರೆಗೂ ಒಟ್ಟಾರೆ 55,47,30,609 ಜನರಿಗೆ ಲಸಿಕೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

SCROLL FOR NEXT