ದೇಶ

ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಣೆ: ಎಸ್ ಜೈಶಂಕರ್

Srinivasamurthy VN

ನವದೆಹಲಿ: ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ರಕ್ಷಣೆಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ವಿಶ್ವಸಂಸ್ಥೆಯ ಭಾರತದ ಪ್ರಸ್ತುತ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ "ಭಯೋತ್ಪಾದಕ ಕೃತ್ಯಗಳಿಂದ ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆಗಳು" ಎಂಬ ಉನ್ನತ ಮಟ್ಟದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಎಸ್ ಜೈಶಂಕರ್ ಅವರು, 'ಭಾರತವು  ಅಫ್ಘಾನ್ ಜನರೊಂದಿಗೆ ಐತಿಹಾಸಿಕ ಸಂಬಂಧವನ್ನು ಹೊಂದಿದ್ದು, ಅದು ತನ್ನ ಆಲೋಚನೆಗಳು ಮತ್ತು ದೃಷ್ಟಿಕೋನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ ಎಂದು ಎಸ್ ಜೈಶಂಕರ್ ಹೇಳಿದರು.

ಹಾಲಿ ಆಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ನಾವು ಗಮನ ಕೇಂದ್ರೀಕರಿಸಿದ್ದೇವೆ. ಆಪ್ಘನ್ ದೇಶದಲ್ಲಿ ಇರುವ ಭಾರತೀಯ ಪ್ರಜೆಗಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವುದು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದ್ದೇವೆ, ವಿಶೇಷವಾಗಿ ಅಮೆರಿಕದೊಂದಿಗೆ. ಅಮೆರಿಕ ಕಾಬುಲ್ ವಿಮಾನ ನಿಲ್ದಾಣವನ್ನು ನಿಯಂತ್ರಿಸುತ್ತಿದೆ. ನಾವು ನೋಡುತ್ತಿರುವ ತಕ್ಷಣದ ಸಮಸ್ಯೆ ನಿಜವಾಗಿಯೂ ನಮ್ಮ ಪ್ರಜೆಗಳ ವಾಪಸಾತಿಯಾಗಿದೆ ಎಂದು ಹೇಳಿದರು.

ಉಗ್ರ ಸಂಘಟನೆಗಳಿಂದ ಪರಿಸ್ಥಿತಿಯ ಲಾಭ
ಅಫ್ಘಾನಿಸ್ತಾನದ ಪರಿಸ್ಥಿತಿ ಮತ್ತು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಇ-ಮೊಹಮ್ಮದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ಹೆಚ್ಚಿಸಲು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಬಹುದು. ದುರದೃಷ್ಟವಶಾತ್ ಗಡಿಯಾಚೆಗಿನ ಭಯೋತ್ಪಾದನೆಯೊಂದಿಗೆ ನಮಗೆ  ಸುದೀರ್ಘ ಅನುಭವವಿದೆ. ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್-ಇ-ತೊಯ್ಬಾ ಎರಡು ಉಗ್ರ ಸಂಘಟನೆಗಳ ಕುರಿತ ಮಾನದಂಡಗಳಲ್ಲಿ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ ಎಂದು ಅವರು ಹೇಳಿದರು.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗಾಗಿ ಅವುಗಳ ಪರಿಣಾಮಗಳ ಬಗ್ಗೆ ಜಾಗತಿಕ ಕಾಳಜಿಯನ್ನು ಹೆಚ್ಚಿಸಿವೆ. ನಿಷೇಧಿತ ಹಕ್ಕಾನಿ ನೆಟ್ವರ್ಕ್ನ ಹೆಚ್ಚಿದ ಚಟುವಟಿಕೆಗಳು ಈ ಹೆಚ್ಚುತ್ತಿರುವ ಆತಂಕವನ್ನು ಸಮರ್ಥಿಸುತ್ತವೆ. ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಮತ್ತು  ಜೈಶ್-ಇ-ಮೊಹಮ್ಮದ್ (ಜೆಇಎಂ) ನಂತಹ ಗುಂಪುಗಳು ನಿರ್ಭಯ ಮತ್ತು ಪ್ರೋತ್ಸಾಹದೊಂದಿಗೆ ಕಾರ್ಯನಿರ್ವಹಿಸುತ್ತಲೇ ಇವೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಲಿಬಾನ್ ದಂಗೆಕೋರರು ಭಾನುವಾರ ಅಫ್ಘಾನ್ ರಾಜಧಾನಿಯನ್ನು ವಶಪಡಿಸಿಕೊಂಡ ನಂತರ ಭಾರತವು ತನ್ನ ರಾಯಭಾರಿ ರುದ್ರೇಂದ್ರ ಟಂಡನ್ ಮತ್ತು ಸಿಬ್ಬಂದಿಯನ್ನು ಕಾಬೂಲ್‌ನ ರಾಯಭಾರ ಕಚೇರಿಯಿಂದ ಮಿಲಿಟರಿ ಸಾರಿಗೆ ವಿಮಾನದಲ್ಲಿ ವಾಪಸ್ ಕರೆಸಿಕೊಂಡಿತ್ತು. ಭಾರತೀಯ ವಾಯುಪಡೆಯ ಸಿ -17  ಗ್ಲೋಬ್‌ಮಾಸ್ಟರ್ ವಿಮಾನವು ರಾಜತಾಂತ್ರಿಕರು, ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಕೆಲವು ಸಿಲುಕಿಕೊಂಡ ಭಾರತೀಯರು ಸೇರಿದಂತೆ ಸುಮಾರು 150 ಜನರನ್ನು ಹೊತ್ತು ಸಾಗಿತ್ತು. ಗುಜರಾತ್‌ನ ಜಾಮ್‌ನಗರದಲ್ಲಿ ಸ್ವಲ್ಪ ಸಮಯದ ನಂತರ ರಾಷ್ಟ್ರ ರಾಜಧಾನಿ ಬಳಿಯ ಹಿಂಡನ್ ವಾಯುನೆಲೆಗೆ  ಬಂದಿಳಿದಿತ್ತು.  

ಭಾರತದ ಎರಡನೇ ತುರ್ತು ಕಾರ್ಯಾಚರಣೆ ಭಾಗವಾಗಿ ಕಾಬೂಲ್‌ನ ಹಮೀದ್ ಕರ್ಜೈ ಇಂಟರ್‌ನ್ಯಾಷನಲ್ (ಎಚ್‌ಕೆಐ) ಏರ್‌ಪೋರ್ಟ್‌ನಿಂದ ಸೋಮವಾರ ಸುಮಾರು 40 ಜನರನ್ನು ಮರಳಿ ಕರೆತಂದ ಎರಡನೇ ಸಿ -17 ವಿಮಾನ ಇದಾಗಿದ್ದು, ಅಮೆರಿಕದ ಅಧಿಕಾರಿಗಳು ಸೇರಿದಂತೆ ಸಂಬಂಧಿತ ಅಧಿಕಾರಿಗಳ  ಸಮನ್ವಯದ ನಂತರ ಈ ಕಾರ್ಯಾಚರಣೆಯನ್ನು ನಡೆಸಲಾಯಿತು. 

SCROLL FOR NEXT