ದೇಶ

ಸೋಂಕಿತ ರಾಷ್ಟ್ರಗಳಿಂದ ಅಂತರಾಷ್ಟ್ರೀಯ ವಿಮಾನ ನಿಲ್ಲಿಸದಿರುವುದು ವಿಷಾದಕರ: ಭಾರತದಲ್ಲಿ ಓಮಿಕ್ರಾನ್ ಪತ್ತೆ ಬಗ್ಗೆ ಕೇಜ್ರಿವಾಲ್

Lingaraj Badiger

ನವದೆಹಲಿ: ಭಾರತದಲ್ಲಿ ಮೊದಲ ಬಾರಿಗೆ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಓಮಿಕ್ರಾನ್ ನ ಎರಡು ಪ್ರಕರಣಗಳು ಪತ್ತೆಯಾದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಹೊಸ ರೂಪಾಂತರಿ ಪೀಡಿತ ದೇಶಗಳಿಂದ ಬರುವ ಅಂತರರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸದಿರುವುದು ದುಃಖಕರ ವಿಚಾರ ಎಂದು ಗುರುವಾರ ಹೇಳಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್ ಅವರು ಕಳೆದ ಭಾನುವಾರ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಪತ್ತೆಯಾಗಿರುವ ದೇಶಗಳಿಂದ ಬರುವ ಅಂತರಾಷ್ಟ್ರೀಯ ವಿಮಾನಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಆದರೆ ಅವರ ಪತ್ರಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ.

ಇಂದು ಬೆಂಗಳೂರಿನಲ್ಲಿ ಇಬ್ಬರಿಗೆ ಓಮಿಕ್ರಾನ್ ದೃಢಪಟ್ಟಿದ್ದು, ಕರ್ನಾಟಕದಲ್ಲಿ ಹೊಸ ರೂಪಾಂತರಿ ಪತ್ತೆಯಾದ ಬಗ್ಗೆ ಮಾಧ್ಯಮಗಳ ವರದಿಯನ್ನು ಟ್ಯಾಗ್ ಮಾಡಿದ ಕೇಜ್ರಿವಾಲ್, "ನಾವು ಓಮಿಕ್ರಾನ್ ಪತ್ತೆಯಾದ ದೇಶಗಳಿಂದ ಬರುವ ವಿಮಾನಗಳನ್ನು ನಿಷೇಧಿಸದಿರುವುದು ದುಃಖಕರ ವಿಚಾರ" ಎಂದು ಟ್ವೀಟ್ ಮಾಡಿದ್ದಾರೆ. 

ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಒಮಿಕ್ರಾನ್ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಅದರಲ್ಲೂ ಕರ್ನಾಟಕದಲ್ಲೇ ಎರಡು ಪ್ರಕರಣಗಳು ಪತ್ತೆಯಾಗಿವೆ. 

66 ಮತ್ತು 46 ವರ್ಷದ ವ್ಯಕ್ತಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಇವರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಮತ್ತೋರ್ವ ವ್ಯಕ್ತಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಇದೆ.

SCROLL FOR NEXT