ದೇಶ

ಮಣಿಪುರದಲ್ಲಿ 500 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

Lingaraj Badiger

ಇಂಫಾಲ್: ಭಾರತ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಮಣಿಪುರದ ಮೊರೆ ಪಟ್ಟಣದಲ್ಲಿ ಈಶಾನ್ಯ ರಾಜ್ಯದ ಇತಿಹಾಸದಲ್ಲಿ ಅತಿದೊಡ್ಡ ಮಾದಕ ದ್ರವ್ಯ ಸಾಗಣೆ ಜಾಲ ಭೇದಿಸಿದ ಅಸ್ಸಾಂ ಪೊಲೀಸರು, 500 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ರಾಜ್ಯ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ಜಂಟಿ ಕಾರ್ಯಾಚರಣೆಯಲ್ಲಿ ಸೋಮವಾರ ಮಧ್ಯಾಹ್ನ ಗೋದಾಮಿನ ಮೇಲೆ ದಾಳಿ ನಡೆಸಲಾಯಿತು ಎಂದು ತೆನುಗೋಪಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮಜಿತ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

3,716 ಸೋಪ್ ಕೇಸ್‌ಗಳಲ್ಲಿ ಪ್ಯಾಕ್ ಮಾಡಿದ ಸುಮಾರು 54 ಕೆಜಿ ಬ್ರೌನ್ ಶುಗರ್ (ಹೆರಾಯಿನ್ ಕಲಬೆರಕೆ) ಮತ್ತು 154 ಕೆಜಿ ತೂಕದ 152 ಪ್ಯಾಕೆಟ್ ಕ್ರಿಸ್ಟಲ್ ಮೆಥಾಂಫೆಟಮೈನ್ ಅನ್ನು ದಾಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಅಂದಾಜು 500 ಕೋಟಿ ರೂಪಾಯಿ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗೋದಾಮಿನ ಮೇಲೆ ಕೆಲಕಾಲ ನಿಗಾ ಇರಿಸಲಾಗಿತ್ತು, ನಂತರ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾನ್ಮಾರ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT