ದೇಶ

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ ಸಿಡಿಎಸ್ ಜ.ಬಿಪಿನ್ ರಾವತ್ ಉತ್ತರಾಧಿಕಾರಿ ಯಾರು? ನಿವೃತ್ತ ಅಧಿಕಾರಿ ನೇಮಕ ಮಾಡಬಹುದೇ?

Sumana Upadhyaya

ನವದೆಹಲಿ: ರಕ್ಷಣಾ ಪಡೆ ಮುಖ್ಯಸ್ಥ(CDS) ಜ.ಬಿಪಿನ್ ರಾವತ್ ಅವರ ಅಂತ್ಯಕ್ರಿಯೆ ಸಕಲ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಗಿದೆ. ಇದೀಗ ಅವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಸಾಕಷ್ಟು ನಡೆಯುತ್ತಿದೆ. 

ಬಿಪಿನ್ ರಾವತ್ ಅವರು ಒಬ್ಬ ಖಡಕ್, ಸಮರ್ಥ ಅಧಿಕಾರಿ ಎಂದು ಹೆಸರಾಗಿದ್ದವರು, ಅವರು ವಹಿಸಿದ್ದ ಹುದ್ದೆಗೆ ಅವರಷ್ಟೇ ಸಮರ್ಥ ನಾಯಕರು ಬೇಕಾಗಿದ್ದಾರೆ. ಅವರ ಹುದ್ದೆಗೆ ನಿವೃತ್ತ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಕೂರಿಸುತ್ತದೆಯೇ ಅಥವಾ ಈಗ ಸೇನೆಯಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಕರೆತಂದು ಕೂರಿಸಲಾಗುತ್ತದೆಯೇ ಎಂಬ ಪ್ರಶ್ನೆಗಳು, ಚರ್ಚೆಗಳು ನಡೆಯುತ್ತಿವೆ.

ತಾಂತ್ರಿಕವಾಗಿ ಆದರೂ, ಸಿಡಿಎಸ್ ಹುದ್ದೆಯನ್ನು ಸಂಸತ್ತಿನ ಕಾಯಿದೆಯಾಗಿ ಅನುಮೋದಿಸದ ಕಾರಣ, ನಿವೃತ್ತ ಅಧಿಕಾರಿಯನ್ನು ಆ ಸ್ಥಾನಕ್ಕೆ ಕರೆತಂದು ಕೂರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಸರ್ಕಾರದ ಕಾರ್ಯನಿರ್ವಾಹಕ ಆದೇಶದ ಪ್ರಕಾರ ಸಿಡಿಎಸ್ ಸ್ಥಾನವನ್ನು ರಚಿಸಲಾಗಿದೆ. ಹಾಗಾಗಿ, ಸದ್ಯದ ಮಟ್ಟಿಗೆ, ನಿವೃತ್ತ ಅಧಿಕಾರಿಯನ್ನು ಸಿಡಿಎಸ್ ಆಗಿ ನೇಮಿಸಲು ಸರ್ಕಾರಕ್ಕೆ ಏನೂ ಅಡ್ಡಿಯಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಏರ್ ಚೀಫ್ ಮಾರ್ಷಲ್ ವಿ ಆರ್ ಚೌಧರಿ ಮತ್ತು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದರಿಂದ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾಣೆ ಅವರು ಸೇನೆಯ ಅವರ ಸಮಾನ ಸೇವಾ ಶ್ರೇಣಿಯ ಅಧಿಕಾರಗಳಲ್ಲಿ ಹಿರಿಯರಾಗಿದ್ದಾರೆ. 

ಜನರಲ್ ನರವಾಣೆ ಅವರು ಮುಂದಿನ ವರ್ಷ ಏಪ್ರಿಲ್ ನಲ್ಲಿ ನಿವೃತ್ತರಾಗಲಿದ್ದಾರೆ. ಇನ್ನಿಬ್ಬರ ಸೇವಾವಧಿ ಎರಡು ವರ್ಷಗಳ ನಿಶ್ಚಿತ ಅಧಿಕಾರಾವಧಿಯು 2023 ರಲ್ಲಿ ಕೊನೆಗೊಳ್ಳುತ್ತದೆ. ದುರಂತ ಸಂಭವಿಸದಿದ್ದರೆ, ಜನರಲ್ ರಾವತ್ ಡಿಸೆಂಬರ್ 2023 ರಲ್ಲಿ ಸೇನಾ ಸೇವೆಯಿಂದ ನಿವೃತ್ತರಾಗುತ್ತಿದ್ದರು.

ಉತ್ತರಾಧಿಕಾರಿಯನ್ನು ಹೆಸರಿಸುವ ಔಪಚಾರಿಕ ಪ್ರಕ್ರಿಯೆಯನ್ನು ಚೀಫ್ ಆಫ್ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್, ಚೀಫ್ಸ್ ಆಫ್ ಸ್ಟಾಫ್ ಕಮಿಟಿಯಿಂದ ಪ್ರಾರಂಭವಾಗುತ್ತದೆ. ಚೀಫ್ಸ್ ಆಫ್ ಸ್ಟಾಫ್ ಸಮಿತಿಯು ಸೇನೆ, ನೌಕಾಪಡೆ ಮತ್ತು ವಾಯುಪಡೆ ಮುಖ್ಯಸ್ಥರನ್ನು ಒಳಗೊಂಡಿದೆ. ಸಮಿತಿಯ ಶಿಫಾರಸ್ಸನ್ನು ರಕ್ಷಣಾ ಸಚಿವಾಲಯಕ್ಕೆ ರವಾನಿಸಲಾಗುತ್ತದೆ, ಅದು ಆಯ್ಕೆಗಾಗಿ ಭದ್ರತೆಯ ಕ್ಯಾಬಿನೆಟ್ ಸಮಿತಿಗೆ ಕಳುಹಿಸುತ್ತದೆ.

ರಕ್ಷಣಾ ಪಡೆ ಸೇನೆಯ ಶಸ್ತ್ರಾಸ್ತ್ರ, ಆಯುಧ ಸಂಗ್ರಹಣೆ, ಆಧುನೀಕರಣ, ಪ್ರಚಾರಗಳು ಮತ್ತು ಹುದ್ದೆಗಳ ಮೇಲೆ ಅಧಿಕಾರ ಹೊಂದಿದೆ.

SCROLL FOR NEXT