ದೇಶ

ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಪ್ರತಿ ಶುಕ್ರವಾರ ಎನ್​ಸಿಬಿ ಕಚೇರಿಯಲ್ಲಿ ಸಹಿ ಮಾಡುವ ಅಗತ್ಯವಿಲ್ಲ- ಬಾಂಬೆ ಹೈಕೋರ್ಟ್

Vishwanath S

ಮುಂಬೈ: ಡ್ರಗ್ಸ್ ಪ್ರಕರಣದ ಆರೋಪಿ ಬಾಲಿವುಡ್ ನಟಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್​ ಸ್ವಲ್ಪ ರಿಲೀಫ್ ನೀಡಿದೆ. ಜಾಮೀನು ನೀಡುವಾಗ ಪ್ರತಿ ಶುಕ್ರವಾರ ಮುಂಬೈನಲ್ಲಿರುವ ಎನ್‌ಸಿಬಿ ಕಚೇರಿಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇದೀಗ ಹೈಕೋರ್ಟ್​ ಇದರ ಅಗತ್ಯವಿಲ್ಲ ಎಂದು ಹೇಳಿದೆ.

ಕ್ರೂಸ್​​ ಡ್ರಗ್ಸ್​​​ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಆರ್ಯನ್ ಖಾನ್ ನವೆಂಬರ್ 5, 12, 19, 26 ಮತ್ತು ಡಿಸೆಂಬರ್ 3 ಮತ್ತು 10 ರಂದು NCB ಮುಂದೆ ಹಾಜರಾಗಿದ್ದರು. ಆರ್ಯನ್ ಖಾನ್‌ಗೆ ಜಾಮೀನು ನೀಡುವಾಗ ಬಾಂಬೆ ಹೈಕೋರ್ಟ್ ಅವರು ಪ್ರತಿ ಶುಕ್ರವಾರ ಬೆಳಗ್ಗೆ 11ರಿಂದ ಮಧ್ಯಾಹ್ನ 2 ಗಂಟೆಯ ಒಳಗೆ ಎನ್​ಸಿಬಿ ಕಚೇರಿಗೆ ಹೋಗಿ ಸಹಿ ಮಾಡಬೇಕು ಎಂದು ಸೂಚಿಸಿತ್ತು.

ಎನ್‌ಸಿಬಿಯ ಮೂರು ಪುಟಗಳ ಪ್ರತಿಕ್ರಿಯೆ ಮತ್ತು ಆರ್ಯನ್ ಖಾನ್ ಅವರ ಮನವಿಯನ್ನು ಪರಿಶೀಲಿಸಿದ ನಂತರ, ನ್ಯಾಯಮೂರ್ತಿ ಎನ್‌. ಡಬ್ಲ್ಯೂ ಸಾಂಬ್ರೆ ಅವರು ಈ ತೀರ್ಪನ್ನು ನೀಡಿದ್ದಾರೆ. ಅಲ್ಲದೇ ಎನ್‌ಸಿಬಿ ಯಾವಾಗ ಬೇಕಾದರೂ ಹಾಗೂ ಎಲ್ಲಿಗೆ ಕರೆದರೂ ಸರಿಯಾದ ಸಮಯಕ್ಕೆ ಬರಬೇಕು ಎಂದು ಕೋರ್ಟ್​ ಆರ್ಯನ್​ ಖಾನ್​ಗೆ​ ಸೂಚಿಸಿದೆ.

ಆರ್ಯನ್ ಖಾನ್ ಎನ್‌ಸಿಬಿ ಕಚೇರಿ ಹೊರತುಪಡಿಸಿ ಬೇರೆ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದರೆ, ಅವರು ಡ್ರಗ್ ಕ್ರೂಸ್ ಪ್ರಕರಣದ ತನಿಖಾಧಿಕಾರಿಗೆ ತಿಳಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಬುಧವಾರ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿ, ‘ಪ್ರಕರಣದಲ್ಲಿ ಏನೂ ಆಗುತ್ತಿಲ್ಲ, ಅವರು (ಖಾನ್) ಸಹಕರಿಸುತ್ತಾರೆ ಮತ್ತು ಅಧಿಕಾರಿಗಳು ಬಯಸಿದಾಗ ಅವರು ಬರುತ್ತಾರೆ. ಈಗ ದೆಹಲಿಯಿಂದ ತನಿಖೆ ನಡೆಯುತ್ತಿದೆ. ಅವರು ಬಯಸಿದರೆ ಆರ್ಯನ್​ ಖಾನ್​​ ದೆಹಲಿಗೆ ಬರಲು ಸಿದ್ಧ ಎಂದು ಕೋರ್ಟ್​ಗೆ ಹೇಳಿದ್ದಾರೆ.

ಎನ್‌ಸಿಬಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸಾತ್, ಮಾರ್ಪಾಡಿನಲ್ಲಿ ಏಜೆನ್ಸಿಗೆ ಯಾವುದೇ ತೊಂದರೆ ಇಲ್ಲ. ಆದರೆ ನಮ್ಮ ಕೋರಿಕೆ ಏನೆಂದರೆ ಅವರು ಕರೆದಾಗಲೆಲ್ಲಾ ಸಹಕರಿಸಬೇಕು ಮತ್ತು ಮುಂಬೈ ಅಥವಾ ದೆಹಲಿಗೆ ಕರೆದಾಗಲೆಲ್ಲಾ ಬರಬೇಕು ಎಂದು ಹೇಳಿದರು.

ಆರ್ಯನ್ ಖಾನ್ ಅವರು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋಗಿದ್ದು, ಜಾಮೀನು ಷರತ್ತುಗಳನ್ನು ಮಾರ್ಪಾಡು ಮಾಡುವಂತೆ ಮನವಿ ಮಾಡಿದ್ದರು. ಪ್ರತಿ ಶುಕ್ರವಾರ ಎನ್‌ಸಿಬಿ ಕಚೇರಿಯಲ್ಲಿ ಹಾಜರಾತಿಯನ್ನು ದಾಖಲಿಸುವುದನ್ನು ತೆಗೆದುಹಾಕುವಂತೆ ಅವರು ಕೋರಿದ್ದರು.

SCROLL FOR NEXT