ದೇಶ

ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ವೇಳೆ ಬಾಂಬ್ ಸ್ಫೋಟ: ಮೂವರು ಮತದಾರರಿಗೆ ಗಾಯ

Lingaraj Badiger

ಕೋಲ್ಕತ್ತಾ: ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್(ಕೆಎಂಸಿ)ಗೆ ಭಾನುವಾರ ಚುನಾವಣೆ ನಡೆಯುತ್ತಿದ್ದು, ಮತದಾನ ಆರಂಭಾದ ಕೆಲವೇ ಗಂಟೆಗಳಲ್ಲಿ ಕೋಲ್ಕತ್ತಾದ ಸೀಲ್ದಾಹ್ ಪ್ರದೇಶದ ಮತಗಟ್ಟೆಯ ಹೊರಗೆ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮೂವರು ಮತದಾರರು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಗೊಂಡವರಲ್ಲಿ ಒಬ್ಬರು ಕಾಲು ಕಳೆದುಕೊಂಡಿದ್ದು, ಉಳಿದ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮತದಾನದ ವೇಳೆ ವಾರ್ಡ್ ಸಂಖ್ಯೆ 36ರ ಟಾಕಿ ಶಾಲೆಯ ಮುಂಭಾಗದಲ್ಲಿ ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಸ್ಫೋಟ ಸಂಭವಿಸಿದೆ. ಗಾಯಗೊಂಡ ಮೂವರು ವ್ಯಕ್ತಿಗಳು ಇದೇ ಕ್ಷೇತ್ರದ ಮತದಾರರು ಎಂದು ಅವರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಎರಡು ಬಾಂಬ್‌ಗಳನ್ನು ಎಸೆದಿದ್ದು, ಅಪರಾಧಿಗಳನ್ನು ಗುರುತಿಸಲು ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ರಾಜ್ಯ ಚುನಾವಣಾ ಆಯೋಗವು ಈ ಬಗ್ಗೆ ಪೊಲೀಸರಿಂದ ವರದಿ ಕೇಳಿದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

SCROLL FOR NEXT