ದೇಶ

ಸ್ಟಾನ್ ಸ್ವಾಮಿ ಸಾವು: ಎಲ್ಗಾರ್ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ನಿರಶನ

Srinivas Rao BV

ಮುಂಬೈ: ನ್ಯಾಯಾಂಗ ವಶದಲ್ಲಿದ್ದ ಸ್ಟಾನ್ ಸ್ವಾಮಿ ಸಾವನ್ನು ಖಂಡಿಸಿ ತಲೋಜಾ ಜೈಲ್ ನಲ್ಲಿರುವ ಎಲ್ಗಾರ್ ಪರಿಷದ್-ಮಾವೋವಾದಿ ನಂಟಿನ ಪ್ರಕರಣದ ಆರೋಪಿಗಳು ಜು.07 ರಂದು ನಿರಶನದ ಮೂಲಕ ಪ್ರತಿಭಟನೆ ನಡೆಸಿದ್ದಾರೆ. 

ಕ್ರೈಸ್ತ ಪಾದ್ರಿಯೊಬ್ಬರು ಸ್ಟಾನ್ ಸ್ವಾಮಿ ಅವರು ಎಲ್ಗಾರ್ ಪರಿಷತ್- ಮಾವೋವಾದಿಗಳ ನಂಟಿನ ಪ್ರಕರಣದ ಆರೋಪಿಯಾಗಿದ್ದರು. ಇವರ ಸಾವನ್ನು ಇನ್ನಿತರ ಆರೋಪಿಗಳು "ಸಾಂಸ್ಥಿಕ ಹತ್ಯೆ" ಎಂದು ಕರೆದಿದ್ದಾರೆ.

ಸ್ಟಾನ್ ಸ್ವಾಮಿ ಸಾವಿಗೆ ಕಾರಣರಾದ ಎಲ್ಗಾರ್ ಪರಿಷತ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಅಧಿಕಾರಿಗಳ ವಿರುದ್ಧ ಹಾಗೂ ತಲೋಜಾ ಜೈಲ್ ನ ಮಾಜಿ ಅಧೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 

2020 ರ ಅಕ್ಟೋಬರ್ ನಲ್ಲಿ ರಾಂಚಿಯಿಂದ ಸ್ಟಾನ್ ಸ್ವಾಮಿ ಅವರನ್ನು ಯುಎಪಿಎ ಕಾಯ್ದೆಯಡಿ ಎನ್ಐಎ ಬಂಧಿಸಿ ನವಿ ಮುಂಬೈ ನಲ್ಲಿದ್ದ ತಲೋಜ ಸೆಂಟ್ರಲ್ ಜೈಲ್ ನಲ್ಲಿರಿಸಿದ್ದರು. ಆರೋಗ್ಯ ಸಮಸ್ಯೆಗಳ ಕಾರಣ ಜಾಮೀನು ನೀಡಬೇಕೆಂದು ಸ್ಟಾನ್ ಸ್ವಾಮಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯ ನಡುವೆಯೇ ಅವರು ಮುಂಬೈ ನ ಆಸ್ಪತ್ರೆಯಲ್ಲಿ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದರು. 

2017 ರ ಡಿಸೆಂಬರ್ 31 ರಂದು ಪುಣೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಚೋದಕ ಭಾಷಣಗಳು ನಡೆದಿದ್ದವು, ಇದಾದ ಮರು ದಿನ ನಡೆದ ಕೊರೆಗಾಂವ್-ಭೀಮಾ ವಾರ್ ಮೆಮೊರಿಯಲ್ ನಲ್ಲಿ ಹಿಂಸಾಚಾರ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಗಾರ್ ಪರಿಷತ್ ಹಾಗೂ ಮಾವೋವಾದಿಗಳೊಂದಿಗೆ ಸಂಪರ್ಕದಲ್ಲಿದ್ದ ಹಲವು ಸಾಮಾಜಿಕ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಈ ಪೈಕಿ ಸ್ಟಾನ್ ಸ್ವಾಮಿಯೂ ಓರ್ವ ಆರೋಪಿಯಾಗಿದ್ದರು. 

ಈಗ ಸ್ಟಾನ್ ಸ್ವಾಮಿ ಅವರ ನಿಧನವನ್ನು ಖಂಡಿಸಿ 10 ಮಂದಿ ಇತರ ಆರೋಪಿಗಳು- ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ಮಹೇಶ್ ರೌತ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಾಖಾ, ಆನಂದ್ ಟೆಲ್ತುಂಬ್ಡೆ, ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ಒಂದು ದಿನ ನಿರಶನ ಮಾಡುವುದರ  ಪ್ರತಿಭಟನೆ ನಡೆಸಿದ್ದಾರೆ.

SCROLL FOR NEXT