ದೇಶ

ನಾಳೆ ದೇಶಾದ್ಯಂತ ಬಿಜೆಪಿ ಸಂಸದರು, ಶಾಸಕರ ನಿವಾಸಗಳ ಹೊರಗೆ ರೈತರ ಪ್ರತಿಭಟನೆ!

Nagaraja AB

ಗಾಜಿಯಾಬಾದ್: ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಆರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರು, ನಾಳೆ ದೇಶಾದ್ಯಂತ ಬಿಜೆಪಿ ಶಾಸಕರ ನಿವಾಸದ ಹೊರಗಡೆ ಪ್ರದರ್ಶನ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಪದಾಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಸುಗ್ರೀವಾಜ್ಞೆಗಳನ್ನಾಗಿ ತಂದ ಒಂದು ವರ್ಷದ ಅಂಗವಾಗಿ ಭಾರತೀಯ ಜನತಾ ಪಕ್ಷದ ಸಂಸದರು, ಶಾಸಕರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕೃತ ಮಾಹಿತಿಗಳು ತಿಳಿಸಿವೆ.

ಕೇಂದ್ರ ಸರ್ಕಾರದ ವಿರುದ್ಧದ ಸಾಂಕೇತಿಕ ಪ್ರತಿಭಟನೆಯಾಗಿ ದೇಶಾದ್ಯಂತ ಬಿಜೆಪಿ ಸಂಸದರು ಹಾಗೂ ಶಾಸಕರ ನಿವಾಸದ ಹೊರಗಡೆ ಕಾನೂನು ಪ್ರತಿಗಳನ್ನು ಪ್ರತಿಭಟನಾಕಾರರು ಸುಡಲಿದ್ದಾರೆ ಎಂದು ಬಿಕೆಯು ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲ್ಲಿಕ್ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು, ಸಂಸದರ ನಿವಾಸದ ಹೊರಗಡೆ ಪ್ರತಿಭಟನೆ ನಡೆಸುವುದಿಲ್ಲ, ಜಿಲ್ಲಾಧಿಕಾರಿಗಳ ಕಚೇರಿ ಹೊರಗಡೆ ಪ್ರತಿಭಟನೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನವೆಂಬರ್ 2020ರಿಂದ ದೆಹಲಿ ಗಡಿಯಲ್ಲಿ ಬಿಡು ಬಿಟ್ಟಿರುವ ರೈತರ ಅಸೋಸಿಯೇಷನ್ ಮತ್ತು ಯೂನಿಯನ್ ಮುಖಂಡರ ಇತ್ತೀಚಿನ ಸಭೆಯಲ್ಲಿ ನಾಳೆ ಪ್ರತಿಭಟನೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. 

SCROLL FOR NEXT