ದೇಶ

ತಿಹಾರ್ ಜೈಲಿನೊಳಗೆ 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯ: ಕೋರ್ಟ್‌ಗೆ 'ಐಸಿಸ್ ವ್ಯಕ್ತಿ' ಹೇಳಿಕೆ

Vishwanath S

ನವದೆಹಲಿ: ದೇಶಾದ್ಯಂತ ಆತ್ಮಾಹುತಿ ದಾಳಿ ಮತ್ತು ಸರಣಿ ಸ್ಫೋಟಗಳನ್ನು ಯೋಜಿಸಿದ್ದಕ್ಕಾಗಿ ಐಸಿಸ್ ಉಗ್ರನನ್ನು ಬಂಧಿಸಲಾಗಿದೆ. ಇನ್ನು ತಿಹಾರ್ ಜೈಲಿನಲ್ಲಿರುವ ತನ್ನ ಮೇಲೆ ಇತರ ಕೈದಿಗಳು ಹಲ್ಲೆ ಮಾಡಿದ್ದು ಅಲ್ಲದೆ 'ಜೈ ಶ್ರೀ ರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿದ್ದಾರೆ ಎಂದು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.  

ದೆಹಲಿ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿ ರಾಜಕಾರಣಿಗಳನ್ನು ಗುರಿಯಾಗಿಸಿ ಆತ್ಮಹತ್ಯಾ ದಾಳಿ ಮತ್ತು ಸರಣಿ ಸ್ಫೋಟಗಳಿಗೆ ಯೋಜಿಸಿದ್ದ ಎಂಬ ಆರೋಪದ ಮೇಲೆ 2018ರಲ್ಲಿ ಐಸಿಸ್ ಪ್ರೇರಿತ ಗುಂಪಿನ ಸದಸ್ಯ ರಶೀದ್ ಜಾಫರ್ ಎಂಬಾತನನ್ನು ಬಂಧಿಸಲಾಗಿತ್ತು.

ಇನ್ನು ತನ್ನ ಮೇಲಿನ ಹಲ್ಲೆ ಕುರಿತಂತೆ ತಂದೆಗೆ ಆರೋಪಿ ತಿಹಾರ್ ಜೈಲಿನಿಂದ ದೂರವಾಣಿ ಕರೆ ಮಾಡಿ ಬಹಿರಂಗಪಡಿಸಿದ್ದಾನೆ. ಈ ಕುರಿತಂತೆ ವಕೀಲ ಎಂಎಸ್ ಖಾನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ನಾಳೆ ಅರ್ಜಿ ವಿಚಾರಣೆ ನಡೆಯಲಿದೆ. ವಕೀಲ ಕೌಸರ್ ಖಾನ್ ಸಲ್ಲಿಸಿರುವ ಅರ್ಜಿಯಲ್ಲಿ "ಈ ಬಗ್ಗೆ ಪರಿಶೀಲನೆ ನಡೆಸಲು ಜೈಲು ಅಧೀಕ್ಷಕರಿಗೆ ಸೂಕ್ತ ನಿರ್ದೇಶನಗಳನ್ನು ನೀಡಬೇಕು" ಎಂದು ವಿನಂತಿಸಿದ್ದಾರೆ. 

ದೆಹಲಿ ಪೊಲೀಸರ ವಿಶೇಷ ದಳ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಜೊತೆಗೂಡಿ ಎನ್ಐಎ ದೆಹಲಿಯ ಸೀಲಾಂಪುರದ ಆರು ಸ್ಥಳಗಳು ಮತ್ತು ಉತ್ತರದ 11 ಸ್ಥಳಗಳಲ್ಲಿ ಶೋಧ ನಡೆಸಿದ್ದು ನಂತರ 2018ರ ಡಿಸೆಂಬರ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿತು. 

ಪೊಟ್ಯಾಸಿಯಮ್ ನೈಟ್ರೇಟ್, ಅಮೋನಿಯಂ ನೈಟ್ರೇಟ್ ಮತ್ತು ಸಲ್ಫರ್ ಎಂಬ 25 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ, ಶೋಧದ ಸಮಯದಲ್ಲಿ ಉಕ್ಕಿನ ಪಾತ್ರೆಗಳು, ವಿದ್ಯುತ್ ತಂತಿಗಳು, 91 ಮೊಬೈಲ್ ಫೋನ್ಗಳು, 134 ಸಿಮ್ ಕಾರ್ಡ್‌ಗಳು, 3 ಲ್ಯಾಪ್‌ಟಾಪ್‌ಗಳು, ಚಾಕು, ಕತ್ತಿ, ಐಸಿಸ್ ಸಂಬಂಧಿತ ಪುಸ್ತಕಗಳನ್ನು ಎನ್‌ಐಎ ವಶಪಡಿಸಿಕೊಂಡಿತ್ತು.

SCROLL FOR NEXT