ದೇಶ

'ಹೇಡಿ' ನೆಹರೂರವರಿಂದಾಗಿ ಭಾರತ ಹಿಂದೂ ರಾಷ್ಟ್ರ ಎಂದು ಘೋಷಣೆಯಾಗಲಿಲ್ಲ: ಬಿಜೆಪಿ ಶಾಸಕ

Sumana Upadhyaya

ಬಲ್ಲಿಯಾ: ಜವಹರಲಾಲ್ ಅವರ ಹೇಡಿ ನಾಯಕತ್ವದಿಂದಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ಘೋಷಣೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಬಲ್ಲಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ. 

ಕಾಂಗ್ರೆಸ್ ನ ಕೊಳಕು ಆಲೋಚನೆಯಿಂದಾಗಿ ಭಾರತ ಇಬ್ಬಾಗವಾಯಿತು ಎಂದು ಹೇಳಿರುವ ಸುರೇಂದ್ರ ಸಿಂಗ್, ಜವಹರಲಾಲ್ ನೆಹರೂ ಪ್ರಧಾನಿಯಾಗಿರದಿದ್ದಿದ್ದರೆ ಭಾರತವನ್ನು ಹಿಂದೂ ರಾಷ್ಟ್ರ ಎಂದು 70 ವರ್ಷಗಳ ಹಿಂದೆಯೇ ಘೋಷಣೆ ಮಾಡುತ್ತಿದ್ದರು ಎಂದಿದ್ದಾರೆ.

ಎರಡು ಸಂಸ್ಕೃತಿಗಳ ಆಧಾರದ ಮೇಲೆ ಎರಡು ದೇಶಗಳನ್ನು ರಚಿಸಲಾಯಿತು. ಆದರೆ ಹೇಡಿ ನೆಹರೂರವರಿಂದಾಗಿ ಸ್ವಾತಂತ್ರ್ಯ ಸಿಕ್ಕಿದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲಿಲ್ಲ ಎಂದು ಹೇಳಿದ್ದಾರೆ.

ನೆಹರೂರವರ ಜಾಗದಲ್ಲಿ ಸರ್ದಾರ್ ಪಟೇಲ್ ಅವರು ಪ್ರಧಾನಿಯಾಗುತ್ತಿದ್ದರೆ ಭಾರತ ಆಗಲೇ ಹಿಂದೂ ರಾಷ್ಟ್ರ ಎಂದು ಘೋಷಣೆಯಾಗುತ್ತಿತ್ತು ಎಂದಿದ್ದಾರೆ.

ಕಾಶ್ಮೀರದಲ್ಲಿ ಸಂವಿಧಾನ ವಿಧಿ 370ನ್ನು ಉಲ್ಲೇಖಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ ಶಾಸಕ, ದಿಗ್ವಿಜಯ್ ಸಿಂಗ್ ವಿರುದ್ಧ ದೇಶದ್ರೋಹ ಕೇಸು ಹಾಕಬೇಕು ಎಂದಿದ್ದಾರೆ.

ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ತೆಗೆದುಹಾಕುವ ಸಂವಿಧಾನ ವಿಧಿ 370 ರದ್ದತಿಯನ್ನು ಮರುಪರಿಶೀಲಿಸಬೇಕು ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಕಾಶ್ಮೀರದಿಂದ ಬ್ರಾಹ್ಮಣರನ್ನು ಕಳುಹಿಸಿದ್ದಾಗ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮೌನ ವಹಿಸಿದ್ದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿದೇಶಿ ಸಂಸ್ಕೃತಿಗೆ ಸೇರಿದವರು, ಅವರು ಮುಸ್ಲಿಂ ಪರವಾಗಿ ರಾಜಕೀಯ ಮಾಡುತ್ತಾರೆ ಎಂದು ಸುರೇಂದ್ರ ಸಿಂಗ್ ಆರೋಪಿಸಿದ್ದಾರೆ.

SCROLL FOR NEXT