ದೇಶ

ದೇಶಾದ್ಯಂತ ನೂತನ ಲಸಿಕಾ ನೀತಿ ಇಂದಿನಿಂದ ಜಾರಿ: ವಯಸ್ಕರಿಗೆ ಉಚಿತ ಲಸಿಕೆ

Srinivasamurthy VN

ನವದೆಹಲಿ: ಈ ಹಿಂದೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ನೂತನ ಲಸಿಕಾ ನೀತಿ ಇಂದಿನಿಂದ ಜಾರಿಯಾಗಿದ್ದು, ವಯಸ್ಕರಿಗೆ ಉಚಿತ ಲಸಿಕೆ ನೀಡಿಕೆ ಕಾರ್ಯಕ್ರಮ ಆರಂಭವಾಗಿದೆ.

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ನೂತನ ಲಸಿಕಾ ನೀತಿ ಇಂದಿನಿಂದ ಜಾರಿಗೆ ಬಂದಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಏನಿದು ನೂತನ ಲಸಿಕಾ ನೀತಿ?
ಕೋವಿಡ್‌–19ರ ಲಸಿಕೆ ನೀತಿಯಲ್ಲಿನ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೂತನ ಲಸಿಕಾ ನೀತಿ ಘೋಷಣೆ ಮಾಡಿದ್ದರು. ಅದರಂತೆ ಜೂನ್‌ 21ರಿಂದ 18 ವರ್ಷಕ್ಕಿಂತ ಮೇಲಿನ ಎಲ್ಲರಿಗೂ ಕೋವಿಡ್‌ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದ್ದರು. 

ಭಾರತದಲ್ಲಿ ಲಸಿಕೆ ತಯಾರಿಸುತ್ತಿರುವ ಕಂಪನಿಗಳಿಂದ ಶೇ 75ರಷ್ಟು ಡೋಸ್‌ ಲಸಿಕೆಗಳನ್ನು ಕೇಂದ್ರ ಸರ್ಕಾರವು ಖರೀದಿಸಲಿದೆ. ರಾಜ್ಯ ಸರ್ಕಾರಗಳಿಗೆ ನಿಗದಿ ಮಾಡಲಾಗಿದ್ದ ಶೇ 25ರಷ್ಟು ಡೋಸ್‌ ಲಸಿಕೆಗಳು ಇದರಲ್ಲಿ ಸೇರಿವೆ. ಉಳಿದ ಶೇ 25ರಷ್ಟು ಡೋಸ್‌ ಲಸಿಕೆಗಳು ಖಾಸಗಿ ಆಸ್ಪತ್ರೆಗಳಿಗೆ ಈಗಿನಂತೆಯೇ ಲಭ್ಯವಾಗಲಿವೆ. ಲಸಿಕೆಯ ನಿಗದಿತ ದರದ ಜತೆಗೆ, ಗರಿಷ್ಠ ರೂ150 ಸೇವಾ ಶುಲ್ಕವನ್ನು ಖಾಸಗಿ ಆಸ್ಪತ್ರೆಗಳು ಪಡೆಯಬಹುದು ಎಂದು ಪ್ರಧಾನಿಯವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಿಳಿಸಿದ್ದರು. 

ಈ ಹಿಂದೆ ಇದ್ದ ಲಸಿಕೆ ನೀತಿಯ ಪ್ರಕಾರ, ಕಂಪನಿಗಳು ತಯಾರಿಸುವ ಲಸಿಕೆಗಳ ಪೈಕಿ ಶೇ 25ರಷ್ಟನ್ನು ರಾಜ್ಯ ಸರ್ಕಾರಗಳು ನೇರವಾಗಿ ಖರೀದಿ ಮಾಡಬೇಕಿತ್ತು. 18-44ರ ವಯೋಮಾನದವರಿಗೆ ಹಾಕಲು ಈ ಲಸಿಕೆಗಳನ್ನು ಬಳಸಬೇಕಿತ್ತು. ಆದರೆ, ಜಾಗತಿಕ ಟೆಂಡರ್‌ ಕರೆದರೂ ಲಸಿಕೆ ಖರೀದಿ  ಸಾಧ್ಯವಾಗುತ್ತಿಲ್ಲ. ಹಾಗಾಗಿ, ಕೇಂದ್ರ ಸರ್ಕಾರವೇ ಲಸಿಕೆಗಳನ್ನು ಪೂರೈಸಬೇಕು ಎಂದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿಗೆ ಪತ್ರ ಬರೆದಿದ್ದರು. ಕೇಂದ್ರ ಸರ್ಕಾರವು ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. 

SCROLL FOR NEXT