ದೇಶ

ಮಾಡರ್ನಾ ಕೋವಿಡ್ ಲಸಿಕೆಗೆ ಡಿಸಿಜಿಐಯಿಂದ ಶೀಘ್ರ ಅನುಮೋದನೆ ಸಾಧ್ಯತೆ; ಲಸಿಕೆ ಆಮದಿಗೆ ಅನುಮತಿ ಕೋರಿದ ಸಿಪ್ಲಾ ಸಂಸ್ಥೆ

Srinivasamurthy VN

ನವದೆಹಲಿ: 18 ವರ್ಷ ಮೇಲ್ಪಟ್ಟ ಕೋವಿಡ್ ಸೋಂಕಿತರಿಗೆ ತುರ್ತು ಬಳಕೆಗಾಗಿ ಮಾಡರ್ನಾ ಸಂಸ್ಥೆ ತನ್ನ ಕೊವಿಡ್ ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ)ದ ಅನುಮತಿ ಕೋರಿದ್ದು, ಶೀಘ್ರ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ ಮಾಡರ್ನಾ ಲಸಿಕೆಯ ಆಮದು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶೀಯ ಔಷಧ ಕಂಪನಿ ಸಿಪ್ಲಾ ಮನವಿ ಸಲ್ಲಿಸಿದ್ದು, ಈ ಮನವಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದೇಶದಲ್ಲಿ ಲಸಿಕೆ ಅಭಿಯಾನ ಮುಂದುವರೆದಿದ್ದು, ಜೂನ್ 21ರಿಂದ ಜಾರಿಗೆ ಬಂದಿರುವ ನೂತನ ಲಸಿಕಾ ನೀತಿಯಿಂದಾಗಿ ದೇಶದಲ್ಲಿ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಸಾಕಷ್ಟು ರಾಜ್ಯಗಳಿಂದ ಹಾಲಿ ಪೂರೈಕೆ ಮಾಡುತ್ತಿರುವ ಲಸಿಕೆಗಳ ಪ್ರಮಾಣಕ್ಕಿಂತ ದುಪ್ಪಟ್ಟು ಪ್ರಮಾಣದ ಬೇಡಿಕೆ ಬರುತ್ತಿದ್ದು, ಮುಂದಿನ ದಿನಗಳಲ್ಲಿ  ಭಾರತದಲ್ಲಿ ಹೊಸ ಹೊಸ ಔಷಧ ತಯಾರಿಕಾ ಸಂಸ್ಥೆಗಳು ಕೋವಿಡ್ ಲಸಿಕೆ ಪೂರೈಕೆ ಮಾಡುವ ನಿರೀಕ್ಷೆ ಇದೆ.

ಈಗಾಗಲೇ ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಜೊತೆಗೆ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ಕೂಡ ಲಸಿಕಾ ಅಭಿಯಾನದ ಭಾಗವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಾಡೆರ್ನಾ  ಸಂಸ್ಥೆಯ ಲಸಿಕೆ ಸೇರಿದಂತೆ ಒಟ್ಟು 7 ಲಸಿಕೆಗಳು ಲಸಿಕಾ ಅಭಿಯಾನದ ಭಾಗವಾಗುವ ಸಾಧ್ಯತೆ ಇದೆ.

ದೇಶದಲ್ಲಿ ಸದ್ಯ ಆಸ್ಟ್ರಾಜೆನೆಕಾದ ಕೋವಿಶೀಲ್ಡ್, ಭಾರತ್‌ ಬಯೋಟೆಕ್‌ನ ಕೊವ್ಯಾಕ್ಸಿನ್‌ ಮತ್ತು ರಷ್ಯಾದ ಸ್ಪುಟ್ನಿಕ್–ವಿ ಲಸಿಕೆ ನೀಡಲು ಅನುಮತಿ ಇದೆ. ದೇಶದ ಲಸಿಕಾ ಅಭಿಯಾನದಲ್ಲಿ ಈ ಲಸಿಕೆಗಳನ್ನು ಬಳಸಲಾಗುತ್ತಿದೆ. 
 

SCROLL FOR NEXT