ದೇಶ

ಬೆದರಿಕೆ ಹಾಕುತ್ತಿರುವವರ ಹೆಸರು ಬಹಿರಂಗ ಪಡಿಸಿ: ಆದಾರ್ ಪೂನಾವಾಲಗೆ ಕಾಂಗ್ರೆಸ್ ಒತ್ತಾಯ

Manjula VN

ನವದೆಹಲಿ: ಲಸಿಕೆ ವಿಚಾರವಾಗಿ ಬೆದರಿಕೆ ಹಾಕುತ್ತಿರುವವರ ಹೆಸರು ಬಹಿರಂಗಗೊಳಿಸಿ ಎಂದು ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿದೆ.

ನಿನ್ನೆಯಷ್ಟೇ ಬ್ರಿಟನ್ ನಿಂದಲೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸೆರಮ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮುಖ್ಯಸ್ಥ ಆದಾರ್ ಪೂನಾವಾಲ, ಲಸಿಕೆ ವಿಚಾರವಾಗಿ ತಮ್ಮ ಮೇಲೆ ಅತೀವ ಒತ್ತಡ ಮತ್ತು ಬೆದರಿಕೆಗಳಿವೆ. ಈ ಪರಿಸ್ಥಿತಿಯಲ್ಲಿ ನಾನು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ನೋವು  ತೋಡಿಕೊಂಡಿದ್ದರು. ಈ ವಿಚಾರ ಇದೀಗ ದೇಶಾದ್ಯಂತ ವ್ಯಾಪಕ ವೈರಲ್ ಆಗುತ್ತಿದ್ದು, ಇದೇ ವಿಚಾರವಾಗಿ ಕಾಂಗ್ರೆಸ್ ಪಕ್ಷ ಕೂಡ ಪ್ರತಿಕ್ರಿಯೆ ನೀಡಿದೆ.

ಈ ಸಂಬಂಧ ಮಾತನಾಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು, ಲಸಿಕೆ ವಿಚಾರವಾಗಿ ಬೆದರಿಕೆ ಹಾಕುತ್ತಿರುವವರ ಹೆಸರನ್ನು ಸಾರ್ವಜನಿಕಗೊಳಿಸುವಂತೆ ಪೂನವಾಲಗೆ ಒತ್ತಾಯಿಸಿದ್ದಾರೆ. ಅಂತೆಯೇ ನಿಮ್ಮ ಸುರಕ್ಷತೆಗಾಗಿ ಕಾಂಗ್ರೆಸ್ ಪಕ್ಷವು ಸಂಪೂರ್ಣ ಜವಾಬ್ದಾರಿಯನ್ನು  ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

'ಆದಾರ್ ಪೂನವಾಲ (ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ) ಅವರು ಕೆಲವು ಹಿರಿಯ ಮುಖಂಡರು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಅವರ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಕಾಂಗ್ರೆಸ್ ತೆಗೆದುಕೊಳ್ಳುತ್ತದೆ. ಆದರೆ ಬೆದರಿಕೆ ಹಾಕಿದ ನಾಯಕರು ಯಾರು ಎಂದು ಅವರು ಸಾರ್ವಜನಿಕವಾಗಿ  ತಿಳಿಸಬೇಕು. ಅವರು ಫೋನ್‌ನಲ್ಲಿ ನನಗೆ ಬೆದರಿಕೆ ಹಾಕಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದರು. ಅವರು ಬೆದರಿಕೆ ಕರೆ ಸ್ವೀಕರಿಸಿದ ವ್ಯಕ್ತಿಯ ಹೆಸರನ್ನು ಅವರು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂತೆಯೇ ಪೂನಾವಾಲಗೆ ವೈ ಶ್ರೇಣಿ ಭದ್ರತೆ ಕಲ್ಪಿಸಿರುವ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಅವರು, 'ಭಾರತದಲ್ಲಿ ಇಲ್ಲದ ವ್ಯಕ್ತಿಗೆ ಕೇಂದ್ರ ಸರ್ಕಾರವು ವೈ ಶ್ರೇಣಿ ಭದ್ರತೆಯನ್ನು ಒದಗಿಸುತ್ತಿದೆ, ಇದು ಅನುಮಾನವನ್ನು ಹುಟ್ಟುಹಾಕುತ್ತದೆ. ಅವರಿಗೆ ಬೆದರಿಕೆ ಹಾಕುತ್ತಿರುವವರ ಹೆಸರನ್ನು  ಬಹಿರಂಗಪಡಿಸುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ ಎಂದು ಪಟೋಲೆ ಹೇಳಿದ್ದಾರೆ. 

ಈ ಹಿಂದೆ ಭಾರತದಲ್ಲಿರುವ ಕೆಲವು ಪ್ರಭಾವಿ ವ್ಯಕ್ತಿಗಳು ಕೋವಿಶೀಲ್ಡ್ ಲಸಿಕೆಗಳನ್ನು ಸರಬರಾಜು ಮಾಡುವಂತೆ ಪೂನಾವಾಲ ಅವರ ಮೇಲೆ ಭಾರಿ ಒತ್ತಡ ಹೇರಿದ್ದರು ಎನ್ನಲಾಗಿದೆ. ಹೀಗಾಗಿ ಸರ್ಕಾರ ಅವರಿಗೆ ವೈ ಶ್ರೇಣಿ ಭದ್ರತೆ ನೀಡಿತ್ತು. ದಿನೇ ದಿನೇ ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಪೂನಾವಾಲ ಅವರು ತಮ್ಮ  ಕುಟುಂಬ ಸಮೇತ ಇಂಗ್ಲೆಂಡ್ ತೆರಳಿದ್ದರು. ಇದೀಗ ಕೋವಿಶೀಲ್ಡ್ ಲಸಿಕೆ ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮಾಡುವ ನಿರ್ಧಾರದೊಂದಿಗೆ ಅವರು ಶೀಘ್ರ ಭಾರತಕ್ಕೆ ವಾಪಾಸ್ಸಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

SCROLL FOR NEXT