ದೇಶ

ಭಾರತದ ಕೋವಿಡ್-19 ವಿರುದ್ಧದ ಹೋರಾಟ ನೆಹರು-ಗಾಂಧಿಗಳು ಸೃಷ್ಟಿಸಿದ ವ್ಯವಸ್ಥೆಯಿಂದ ಸಾಧ್ಯವಾಗಿದೆ: ಶಿವಸೇನೆ

Srinivas Rao BV

ಮುಂಬೈ: ಕೋವಿಡ್-19 ನಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸುವ ವಿಷಯದಲ್ಲಿ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಟೀಕೆ ಮಾಡಿದೆ. "ಭಾರತದಲ್ಲಿ ಕೋವಿಡ್-19 ನಿಭಾಯಿಸುವುದಕ್ಕಾಗಿ ನೆರೆಯ ಸಣ್ಣರಾಷ್ಟ್ರಗಳೂ ಸಹಾಯಹಸ್ತ ಚಾಚುತ್ತಿವೆ, ಆದರೆ ಮೋದಿ ಸರ್ಕಾರ, ಬಹುಕೋಟಿ ರೂಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ಸ್ಥಗಿತಗೊಳಿಸುವುದಕ್ಕೂ ಸಿದ್ಧವಿಲ್ಲ ಎಂದು ಸಾಮ್ನಾದಲ್ಲಿ ಟೀಕಿಸಿದೆ. 

ಭಾರತ ಇಂದು ಕೊರೋನಾದ ವಿರುದ್ಧ ಹೋರಾಡುತ್ತಿದ್ದರೆ, ಅದಕ್ಕೆ ಈ ಹಿಂದಿನ 70 ವರ್ಷಗಳಲ್ಲಿ ಪಂಡಿತ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸೃಷ್ಟಿಸಲಾದ ವ್ಯವಸ್ಥೆ ಕಾರಣ. ಈ ವ್ಯವಸ್ಥೆ ಭಾರತ ಸಂಕಷ್ಟದ ಕಾಲವನ್ನು ನಿಭಾಯಿಸುವುದಕ್ಕೆ ಸಾಧ್ಯವಾಗಿದೆ. 

ಯುಎನ್ಐಸಿಇಎಫ್ ಕೂಡ ಭಾರತದಲ್ಲಿರುವ ಕೋವಿಡ್-19 ಪರಿಸ್ಥಿತಿಯಿಂದಾಗಿ ವಿಶ್ವಕ್ಕೆ ಅಪಾಯವಿದೆ ಎಂಬ ಆತಂಕ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೇ ಸಾಧ್ಯವಾದಷ್ಟೂ ಹೆಚ್ಚಿನ ದೇಶಗಳು ಸಹಾಯ ಮಾಡಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ. ಬಾಂಗ್ಲಾದೇಶ 10,000 ರೆಮ್ಡಿಸಿವರ್ ಔಷಧಗಳನ್ನು ಕಳಿಸಿದೆ, ಭೂತಾನ್ ವೈದ್ಯಕೀಯ ಆಕ್ಸಿಜನ್ ನ್ನು ಕಳಿಸಿದೆ. ನೇಪಾಳ, ಮ್ಯಾನ್ಮಾರ್ ಹಾಗೂ ಶ್ರೀಲಂಕಾಗಳೂ ಸಹ ಆತ್ಮನಿರ್ಭರ ಭಾರತದ ಸಹಾಯಕ್ಕೆ ಧಾವಿಸಿವೆ. ಇಂದು ಭಾರತ ಉಳಿದಿರುವುದು ನೆಹರು-ಗಾಂಧಿಗಳ ವ್ಯವಸ್ಥೆಯ ಸೃಷ್ಟಿಯಿಂದ, ಬೇರೆ ರಾಷ್ಟ್ರಗಳಿಂದ ಸಹಾಯ ಪಡೆಯುತ್ತಿದ್ದ ಪಾಕಿಸ್ತಾನ, ಕಾಂಗೋ, ರುವಾಂಡಾಗಳಂತಹ ರಾಷ್ಟ್ರಗಳು ಇಂದು ಭಾರತಕ್ಕೆ ಸಹಾಯ ಮಾಡುವ ಮಾತನ್ನಾಡುತ್ತಿವೆ, ಇದು ಇಂದಿನ ಆಳುವವರ ತಪ್ಪಾದ ನೀತಿಗಳ ಪರಿಣಾಮ ಎಂದು ಶಿವಸೇನೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. 

SCROLL FOR NEXT