ದೇಶ

ತಾಂತ್ರಿಕ ಸಮಸ್ಯೆ ನಿವಾರಣೆ: ಮತ್ತೆ ಆಕ್ಸಿಜನ್ ಉತ್ಪಾದನೆ ಆರಂಭಿಸಿದ ತೂತುಕುಡಿ 'ಸ್ಟೆರ್ಲೈಟ್' ಸಂಸ್ಥೆ

Srinivasamurthy VN

ತೂತುಕುಡಿ: ತಾಂತ್ರಿಕ ಸಮಸ್ಯೆಯಿಂದಾಗಿ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಳಿಸಿದ್ದ ತೂತುಕುಡಿ 'ಸ್ಟೆರ್ಲೈಟ್' ಸಂಸ್ಥೆ ಇದೀಗ ತನ್ನ ವೈದ್ಯಕೀಯ ಆಮ್ಲಜನಕ ಉತ್ಪಾದನೆಯನ್ನು ಪುನಾರಂಭಿಸಿದೆ.

ಇತ್ತೀಚೆಗಷ್ಟೇ ಆಮ್ಲಜನಕ ಉತ್ಪಾದನೆ ಆರಂಭಿಸಿದ್ದ 'ಸ್ಟೆರ್ಲೈಟ್' ಕಾಪರ್ ಸಂಸ್ಥೆ ಮೊದಲ ಹಂತದ ವೈದ್ಯಕೀಯ ಆಕ್ಸಿಜನ್ ಅನ್ನು ಕೂಡ ಆಸ್ಪತ್ರೆಗೆ ರವಾನೆ ಮಾಡಿತ್ತು. ಬಳಿಕ ಮೇ 14ರಂದು ಈ ಘಟಕದಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನಲೆಯಲ್ಲಿ ಇಲ್ಲಿ ಆಮ್ಲಜನಕ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು.  ಘಟಕದ ಕೋಲ್ಡ್ ಬಾಕ್ಸ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ತುರ್ತು ಕ್ರಮ ಕೈಗೊಂಡಿದ್ದ ಅಧಿಕಾರಿಗಳು ಇಸ್ರೋದ ಅಧಿಕಾರಿಗಳೂ ಸೇರಿದಂತೆ ಹಲವು ತಜ್ಞರನ್ನು ಈ ತಾಂತ್ರಿಕ ದೋಷ ಸರಿಪಡಿಸಲು ನಿಯೋಜಿಸಿದ್ದರು. ಇದೀಗ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು ಇಂದಿನಿಂದ ಮತ್ತೆ ಆಮ್ಲಜನಕ  ಉತ್ಪಾದನೆ ಆರಂಭಿಸಲಾಗಿದೆ. 

ಈ ಬಗ್ಗೆ ಸ್ಟೆರ್ಲೈಟ್ ಸಂಸ್ಥೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, 'ಆಮ್ಲಜನಕ ಸ್ಥಾವರದಲ್ಲಿನ ತಾಂತ್ರಿಕ ದೋಷ ಸರಿಪಡಿಸಲಾಗಿದ್ದು, ಆಮ್ಲಜನಕದ ಉತ್ಪಾದನೆಯು ಪುನರಾರಂಭಗೊಂಡಿದೆ. ಅಂತೆಯೇ ನಮ್ಮ ಆನ್‌ಸೈಟ್ ಸೌಲಭ್ಯಗಳಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ  ನೋಡಲ್ ಅಧಿಕಾರಿಗಳ ನಿರ್ದೇಶನದಂತೆ ವಿತರಿಸಲಾಗುವುದು ಎಂದು ಹೇಳಿದೆ. 

ಮೂಲಗಳ ಪ್ರಕಾರ ಈ ಘಟಕದಲ್ಲಿ ಸುಮಾರು 300ಕ್ಕೂ ಅಧಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ದಿನಕ್ಕೆ 35 ಟನ್ ಗಿಂತಲೂ ಅಧಿಕ ಆಕ್ಸಿಜನ್ ಉತ್ಪಾದಿಸುವ ಗುರಿ ಹೊಂದಲಾಗಿದೆ. 

SCROLL FOR NEXT