ದೇಶ

ಸೋತರೂ ಮತದಾರರಿಗೆ ಕೊಟ್ಟ ಮಾತು ಉಳಿಸಿಕೊಂಡ ಮೆಟ್ರೋ ಮ್ಯಾನ್ ಶ್ರೀಧರನ್: ಪರಿಶಿಷ್ಟರ ಕುಟುಂಬಕ್ಕೆ ವಿದ್ಯುತ್ ಸೌಕರ್ಯ!

Nagaraja AB

ಪಾಲಕ್ಕಡ್: ಇತ್ತೀಚಿಗೆ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಡ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೆಟ್ರೋ ಮ್ಯಾನ್ ಇ.ಶ್ರೀಧರನ್ ಕಾಂಗ್ರೆಸ್ ಅಭ್ಯರ್ಥಿ ಶಫಿ ಪರಂಬಿಲ್ ಅವರ ಎದುರು ಕೇವಲ 4 ಸಾವಿರ ಮತಗಳ ಅಂತರದಿಂದ ಸೋತಿರಬಹುದು. ಆದರೆ, ಸೋತ ಮೇಲೂ ನುಡಿದಂತೆ ನಡೆದಿದ್ದಾರೆ. ಮತದಾರರಿಗೆ ತಾನು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 

ಚುನಾವಣೆ ಪ್ರಚಾರದ ವೇಳೆಯಲ್ಲಿ ತಾನು ಗೆಲಲ್ಲಿ ಅಥವಾ ಸೋಲಲಿ, ಪಾಲಕ್ಕಡ್ ಮುನ್ಸಿಪಾಲಿಟಿಯ ಮದುರವೀರನ್ ಕಾಲೋನಿಯ  ಎಲ್ಲಾ ಕುಟುಂಬಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ 88 ವರ್ಷದ ಮೆಟ್ರೋ ಮ್ಯಾನ್ ಭರವಸೆ ಕೊಟ್ಟಿದ್ದರು.

ಮುನ್ಸಿಪಾಲಿಟಿಯ ವಾರ್ಡ್ ನಂಬರ್ 3 ರಲ್ಲಿನ ಕೆಲ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಮತ್ತೆ ಕೆಲವು ಮನೆಗಳ ವಿದ್ಯುತ್ ಶುಲ್ಕ ಬಾಕಿ ಇದುದ್ದರಿಂದ ವಿದ್ಯುತ್ ಸಂಪರ್ಕವನ್ನು ಕಿತ್ತು ಹಾಕಲಾಗಿತ್ತು. ಈ ಬಗ್ಗೆ ನಿವಾಸಿಗಳ ಗುಂಪೊಂದು ಶ್ರೀಧರ್ ಅವರನ್ನು ಕೋರಿದ್ದಾಗ ವಿದ್ಯುತ್ ಸಂಪರ್ಕ ಒದಗಿಸುವುದಾಗಿ ಶ್ರೀಧರನ್ ಹೇಳಿದ್ದರು.

ಅದರಂತೆ ಮಂಗಳವಾರ ಈ ಕುಟುಂಬದ ಬಾಕಿ ವಿದ್ಯುತ್ ಬಾಕಿ ಪಾವತಿಗಾಗಿ 81, ಸಾವಿರದ 525 ರೂ. ಚೆಕ್ ನ್ನು ಸಹಾಯಕ ಎಂಜಿನಿಯರ್, ಕೆಎಸ್ಇಬಿ ಕಲ್ಪತಿ ಇವರ ಹೆಸರಿಗೆ ಶ್ರೀಧರನ್ ಕಳುಹಿಸಿದ್ದಾರೆ. ಅಲ್ಲದೇ, ಪರಿಶಿಷ್ಟ ಜಾತಿಯ 11 ಕುಟುಂಬಗಳಿಗೆ ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಬಿಜೆಪಿ ಜಿಲ್ಲಾ ಅಧ್ಯಕ್ಷ ಇ. ಕೃಷ್ಣಾದಾಸ್ ಅವರಿಂದ ಉದ್ಘಾಟಿಸಲ್ಪಟ್ಟ ಕಾರ್ಯಕ್ರಮವೊಂದರಲ್ಲಿ ಮೆಟ್ರೋ ಮ್ಯಾನ್ ಚೆಕ್ ನ್ನು ಹಸ್ತಾಂತರಿಸಿದರು. ವಾರ್ಡ್ ಕೌನ್ಸಿಲರ್ ವಿ. ನಟೇಶನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಾಲಕ್ಕಡ್ ಮುನ್ಸಿಪಾಲ್ ಸ್ಥಾಯಿ ಸಮಿತಿ ಅಧ್ಯಕ್ಷ ಪಿ ಸ್ಮಿತೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

SCROLL FOR NEXT