ದೇಶ

ಅಕ್ರಮ ಹಣ ವರ್ಗಾವಣೆ: ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಗೆ 14 ದಿನಗಳ ನ್ಯಾಯಾಂಗ ಬಂಧನ

Vishwanath S

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ರನ್ನು ಇಂದು ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. 

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶಮುಖ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ. ನಂತರ ದೇಶಮುಖ್ ಅವರನ್ನು ನವೆಂಬರ್ 6ರವರೆಗೆ ಇಡಿ ಕಸ್ಟಡಿಗೆ ಕಳುಹಿಸಲಾಯಿತು. ಶನಿವಾರ ದೇಶಮುಖ್ ಅವರನ್ನು ವಿಶೇಷ ರಜಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ, ಇಡಿ ತನ್ನ ಕಸ್ಟಡಿಗೆ ಕೋರಿತ್ತು, ಆದರೆ ನ್ಯಾಯಾಲಯ ಇದನ್ನು ನಿರಾಕರಿಸಿ, ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 12 ಗಂಟೆಗಳ ವಿಚಾರಣೆಯ ನಂತರ ಕಳೆದ ಸೋಮವಾರ ಅನಿಲ್ ದೇಶಮುಖ್ ರನ್ನು ಇಡಿ ಬಂಧಿಸಿತ್ತು. ವಿಚಾರಣೆ ವೇಳೆ, ಅನಿಲ್ ದೇಶಮುಖ್ ಅವರ ಪರವಾಗಿ ಯಾವುದೇ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರಗಳನ್ನು ನೀಡಲಾಗಿಲ್ಲ ಎಂದು ತನಿಖಾ ಸಂಸ್ಥೆ ಸ್ಪಷ್ಟವಾಗಿತ್ತು. ಹೀಗಾಗಿ ದೇಶ್ ಮುಖ್ ರನ್ನು ಬಂಧಿಸಲಾಗಿತ್ತು

ದೇಶಮುಖ್ ಪುತ್ರನ ಮೇಲೂ ಇಡಿ ವಿಚಾರಣೆ
ಇದಕ್ಕೂ ಮುನ್ನ ಇಡಿ ಅನಿಲ್ ದೇಶಮುಖ್ ಅವರ ಪುತ್ರ ಹೃಷಿಕೇಶ್ ದೇಶಮುಖ್ ರನ್ನು ವಿಚಾರಣೆ ನಡೆಸಿತ್ತು. ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಕಚೇರಿಗೆ ಕರೆಸಿಕೊಂಡಿತ್ತು.

ಪ್ರಕರಣ ಏನು?
ಕಳೆದ ಫೆಬ್ರವರಿ 25ರಂದು, ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಆಂಟಿಲಿಯಾ ಹೊರಗೆ ಸ್ಫೋಟಕಗಳನ್ನು ತುಂಬಿದ ವಾಹನವು ಪತ್ತೆಯಾಯಿತು. ಈ ವೇಳೆ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೆಸರು ಕೇಳಿಬಂತು. ಇದರ ನಂತರ, ಮಹಾರಾಷ್ಟ್ರ ಸರ್ಕಾರವು ಆಗಿನ ಮುಂಬೈ ಪೊಲೀಸ್ ಕಮಿಷನರ್ ಪರಂಬಿರ್ ಸಿಂಗ್ ಅವರನ್ನು ವರ್ಗಾವಣೆ ಮಾಡಿತು. ಅವರನ್ನು ಗೃಹರಕ್ಷಕ ದಳದ ಡಿಜಿಯನ್ನಾಗಿ ಮಾಡಿತು. ಇದಾದ ನಂತರ ಪರಂಬೀರ್ ಸಿಂಗ್ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು ಈ ಪತ್ರದಲ್ಲಿ ಅನಿಲ್ ದೇಶ್ ಮುಖ್ ಸಚಿನ್ ವಾಜೆಯಿಂದ ಪ್ರತಿ ತಿಂಗಳು 100 ಕೋಟಿ ರೂಪಾಯಿ ನೀಡುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದರು. 

SCROLL FOR NEXT