ದೇಶ

ಚೆನ್ನೈ ನ 500 ರಸ್ತೆಗಳು ಜಲಾವೃತ, ಹೆಲ್ಪ್ ಲೈನ್ ಗೆ 3,800 ದೂರು ದಾಖಲು

Srinivas Rao BV

ಚೆನ್ನೈ: ಚೆನ್ನೈ ನಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 

ಚೆನ್ನೈ ನ ಪ್ರಮುಖ ಪ್ರದೇಶಗಳಾದ ಟಿ ನಗರ್, ಅಶೋಕ್ ನಗರ್, ಕೆಕೆ ನಗರ್, ತೇಯ್ನಮ್ಪೇಟ್ ಗಳು ಜಲಾವೃತಗೊಂಡಿವೆ. 

ಗುರುವಾರ ಒಂದೇ ದಿನ 502 ರಸ್ತೆಗಳು ಜಲಾವೃತಗೊಂಡಿದ್ದು, ಸ್ಥಳೀಯ ಆಡಳಿತ ತೆರೆದಿರುವ ಸಹಾಯವಾಣಿಗೆ 3,800 ದೂರುಗಳು ಗುರುವಾರ ಒಂದೇ ದಿನ ಬಂದಿದ್ದು, ಈ ಮಳೆಗಾಲದ ಋತುವಿನಲ್ಲಿ ಬಂದಿರುವ ಗರಿಷ್ಠ ದೂರುಗಳಾಗಿವೆ.

ಈಗಾಗಲೇ ಜಲಾವೃತಗೊಂಡಿರುವ ಅಶೋಕ್ ನಗರ ಹಾಗೂ ಟಿ ನಗರಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದ್ದು, ಈ ಭಾಗದಲ್ಲಿ ವಾಸಿಸುತ್ತಿರುವ ಮಂದಿ ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. 

ಇಂದು ಮಳೆಯಾಗದೇ ಇದ್ದಲ್ಲಿ ಜಲಾವೃತಗೊಂಡ ರಸ್ತೆಗಳಲ್ಲಿ ನೀರಿನ ಮಟ್ಟ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕಾರ್ಪೊರೇಷನ್ ಅಧಿಕಾರಿಗಳು ತಿಳಿಸಿದ್ದಾರೆ. 

"ನಾವು ನೀರನ್ನು ಪಂಪ್ ಮಾಡಿ ಅಡ್ಯಾರ್ ನದಿಗೆ ಹೊರಹಾಕುತ್ತಿದ್ದೇವೆ. ಆದರೆ ನೀರಿನ ಮಟ್ಟ ಹೆಚ್ಚಾಗಿದೆ. ಮುಖ್ಯಮಂತ್ರಿಗಳ ನಿವಾಸವೂ ಜಲಾವೃತಗೊಳ್ಳುವುದರಿಂದ ತಪ್ಪಿಸಿಕೊಂಡಿಲ್ಲ. ಸಾಧ್ಯವಾದಷ್ಟೂ ಬೇಗ ನೀರನ್ನು ತೆರವುಗೊಳಿಸಲು ಯತ್ನಿಸುತ್ತೇವೆ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT