ದೇಶ

ಹಠ ಮಾಡಬೇಡಿ, ಮನೆಗೆ ಹಿಂತಿರುಗಿ: ಎಂಎಸ್ ಪಿ ಬಗ್ಗೆ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿರುವ ರೈತರಿಗೆ ಕೇಂದ್ರ ಒತ್ತಾಯ

Nagaraja AB

ನವದೆಹಲಿ: ಕನಿಷ್ಠ ಬೆಂಬಲ ಬೆಲೆಗಾಗಿ ಕಾನೂನು ಖಾತ್ರಿಯಾಗುವವರೆಗೂ ಪ್ರತಿಭಟನೆ ಮುಂದುವರೆಸಲು ರೈತರು ನಿರ್ಧರಿಸಿರುವಂತೆಯೇ,  ಅವರ ಬೇಡಿಕೆಯಾಗಿದ್ದ ವಿವಾದಿತ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ್ದು, ಹಠ ಮಾಡಬೇಡಿ, ತಮ್ಮ ಮನೆಗಳಿಗೆ ಹಿಂತಿರುಗಿ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್ ಚೌಧರಿ ಶುಕ್ರವಾರ ಒತ್ತಾಯಿಸಿದ್ದಾರೆ.

ರೈತರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರ ಮೂರು ಕೃಷಿ ಕಾನೂನುಗಳನ್ನು ಜಾರಿಗೆ ತಂದಿತ್ತು. ಹಿಂದಿನ ಸರ್ಕಾರ ಇಂತಹ ಕಾನೂನು ಜಾರಿಗೊಳಿಸಲು ಪ್ರಯತ್ನ ನಡೆಸಿತ್ತು. ಆದಾಗ್ಯೂ, ಸರ್ಕಾರ ಹಾಗೂ ಪ್ರಮುಖ ರೈತ ಒಕ್ಕೂಟಗಳ ಪ್ರತಿನಿಧಿಗಳ ನಡುವಣ ಹಲವು ಸುತ್ತಿನ ಚರ್ಚೆಯ ನಂತರವೂ  ಕೆಲ ರೈತರು ಈ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ ಎಂದು ಚೌಧರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಚರ್ಚೆಯ ನಂತರವೂ ಈ ಕಾನೂನುಗಳನ್ನು ಅರ್ಥ ಮಾಡಿಕೊಳ್ಳಲು ಅವರು ಪ್ರಯತ್ನಿಸಲಿಲ್ಲ, ಕೆಲ ರೈತರನ್ನು ಮನವೊಲಿಸುವಲ್ಲಿ ನಾವು ಯಶಸ್ವಿಯಾಗಲಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ವಿಶಾಲ ಹೃದಯದೊಂದಿಗೆ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

ಚರ್ಚೆಯ ನಂತರ ಕೃಷಿ ಕಾನೂನುಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರ ಲಾಭ ಪಡೆಯಲು ರೈತರು ಹೆಚ್ಚು ದಿನ ಕಾಯಬೇಕಾಗಿಲ್ಲ ಎಂದು ಅವರು ತಿಳಿಸಿದರು. ಮೂರು ಕೃಷಿ ಕಾನೂನುಗಳು ಪಾರ್ಲಿಮೆಂಟ್ ನಲ್ಲಿ ರದ್ದಾಗಬೇಕು ಹಾಗೂ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ಒದಗಿಸಿದ ನಂತರವಷ್ಟೇ ಪ್ರತಿಭಟನೆ ಹಿಂಪಡೆಯುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. 

SCROLL FOR NEXT