ದೇಶ

ಮಳೆಗೆ ಕೇರಳ ತತ್ತರ: ಪ್ರವಾಹ, ಭೂಕುಸಿತಕ್ಕೆ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ; 11 ಮೃತದೇಹಗಳು ಪತ್ತೆ

Nagaraja AB

ಕೊಟ್ಟಾಯಂ: ಕೇರಳದಲ್ಲಿ ಧಾರಾಕಾರ ಮಳೆಯಿಂದ ಸಂಭವಿಸಿದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಭಾನುವಾರ ಮಧ್ಯಾಹ್ನ ಕೊಟ್ಟಾಯಂನಲ್ಲಿ 12, ಇಡುಕಿಯಲ್ಲಿ 6 ಹಾಗೂ ಕೊಝಿಕೋಡ್ ನಲ್ಲಿ 1 ಸಾವಿನ ಪ್ರಕರಣಗಳು ವರದಿಯಾಗಿದೆ.

ಕೊಟ್ಟಾಯಂನ ಕೊಟ್ಟಕ್ಕಲ್ ಪಂಚಾಯತ್ ನಲ್ಲಿ ಭೂ ಕುಸಿತದಿಂದ ನಾಪತ್ತೆಯಾಗಿದ್ದ ಎಲ್ಲಾ 11 ಜನರು ಮೃತದೇಹ ಪತ್ತೆಯಾಗಿದೆ.  ಮೃತರನ್ನು ಕ್ಲಾರಮ್ಮ, ಸಿನಿ, ಸೋನಾ, ಸಾಂದ್ರಾ, ಮಾರ್ಟಿನ್, ಸ್ನೇಹಾ, ರೊಶಿಣಿ, ಸರಸಮ್ಮ ಮೋಹನ್ , ಸೋನಿಯಾ, ಅಳನ್ ಮತ್ತು ಶಾಲೆಟ್ ಎಂದು ಗುರುತಿಸಲಾಗಿದೆ. 

ಕೊಟ್ಟಾಯಂ ಜಿಲ್ಲೆಯ ಪಶ್ಚಿಮ ಘಟ್ಟ ಹಾಗೂ ಇಡುಕ್ಕಿ ಜಿಲ್ಲೆಯ ಪೂರ್ವ ಭಾಗದಲ್ಲಿ ಸರಣಿ ಭೂ ಕುಸಿತ ಸಂಭವಿಸುತ್ತಿದೆ. ಕೊಟ್ಟಾಯಂ ನಲ್ಲಿ ಮಳೆ ಸಂಬಂಧಿತ ಹಾನಿಯಲ್ಲಿ ಇದು ದು:ಖಕರ ಕೇಸ್ ಆಗಿದೆ.  ಕೊಟ್ಟಿಕ್ಕಲ್ ಪಂಚಾಯತ್ ನಲ್ಲಿ ಧಾರಾಕಾರ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ಹಾನಿಯಾಗಿದೆ. ಪ್ಲಾಪಲ್ಲಿ ಮತ್ತು ಕಾವಲಿಯಲ್ಲಿ ಮೂರು ಮನೆಗಳು ಹಾಗೂ ಒಂದು ಟೀ ಅಂಗಡಿ ಭೂ ಕುಸಿತದಿಂದಾಗಿ ಸಂಪೂರ್ಣವಾಗಿ ಭಸ್ಮವಾಗಿರುವ ಬಗ್ಗೆ ವರದಿಯಾಗಿದೆ. 

ಈ ಹಿಂದೆ ಇಡುಕಿಯ ಕೊಕ್ಕಾಯಾರ್ ನಲ್ಲಿ ಸಂಭಿವಿಸದ ಭೂ ಕುಸಿತದಿಂದ ಹಲವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿತ್ತು. ಧಾರಾಕಾರ ಮಳೆಯಿಂದಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ನೇತೃತ್ವದ ರಕ್ಷಣಾ ತಂಡ ಹಾಗೂ ಶ್ವಾನದಳವೊಂದು ಕೊಕ್ಕಾಯರ್ ನಲ್ಲಿ ತೊಂದರೆಗೆ ಸಿಲುಕಿತ್ತು. ಕೊಕ್ಕಾಯರ್ ನಲ್ಲಿ ನಾಪತ್ತೆಯಾದ ಏಳು ಮಂದಿಯಲ್ಲಿ ಐವರು ಮಕ್ಕಳಾಗಿದ್ದಾರೆ. 

ಈ ಮಧ್ಯೆ ಕೇರಳದ ಐದು ಜಿಲ್ಲೆಗಳಲ್ಲಿ ರೆಡ್ ಆಲರ್ಟ್ ಹಿನ್ನೆಲೆಯಲ್ಲಿ ಕೊಚ್ಚಿಯಲ್ಲಿರುವ ದಕ್ಷಿಣ ನೌಕ ಕಮಾಂಡ್ ಕೇಂದ್ರ ಕಚೇರಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಆಡಳಿತಕ್ಕೆ ನೆರವಾಗುತ್ತಿದೆ. ವಿಮಾನಗಳ  ಕೊಟ್ಟಿಕ್ಕಾಲ್ ನಲ್ಲಿ ಸಿಲುಕಿರುವ ಕುಟುಂಬಗಳನ್ನು ಏರ್ ಲಿಫ್ಟ್ ಮಾಡಲು ದಕ್ಷಿಣ ನೌಕ ಕಮಾಂಡ್ ನಿಂದ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಾಯವನ್ನು ಕೋರಿದೆ.

SCROLL FOR NEXT