ದೇಶ

ಜೆರುಸಲೆಂನಲ್ಲಿ 12ನೇ ಶತಮಾನದ ಭಾರತೀಯ ಸೂಫಿ ಸಂತನ ಪವಿತ್ರ ಸ್ಥಳಕ್ಕೆ ಜೈಶಂಕರ್ ಭೇಟಿ

Harshavardhan M

ಜೆರುಸಲೆಂ: ಇಸ್ರೇಲ್ ಭೇಟಿ ಸಂದರ್ಭ ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಜೆರುಸಲೆಂನಲ್ಲಿ ನೆಲೆಗೊಂಡ ಪ್ರಾಚೀನ ಭಾರತೀಯ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. 

ಆ ಚಿಕಿತ್ಸಾ ಕೇಂದ್ರದಲ್ಲಿ ಫಲಕವೊಂದನ್ನು ಜೈಶಂಕರ್ ಅವರು ಉದ್ಘಾಟಿಸಿದ್ದಾರೆ. ಅದರಲ್ಲಿ 12ನೇ ಶತಮಾನದಲ್ಲಿ ನಿರ್ಮಾಣಗೊಂಡ ಭಾರತೀಯ ಚಿಕಿತ್ಸಾ ಕೇಂದ್ರ, ಭಾರತ ವಿದೇಶಾಂಗ ಸಚಿವಾಲಯದಿಂದ ಅನುದಾನಿತ ಎಂದು ಬರೆಯಲಾಗಿದೆ. 

ಈ ಚಿಕಿತ್ಸಾ ಕೇಂದ್ರದ ಹಿನ್ನೆಲೆ ಬಹಳ ಸ್ವಾರಸ್ಯಕರವಾಗಿದೆ. 12ನೇ ಶತಮಾನದಲ್ಲಿ ಭಾರತದ ಸೂಫಿ ಸಂತನೊಬ್ಬ ಪವಿತ್ರ ನಗರಿ ಜೆರುಸಲಂಗೆ ಬಂದಿದ್ದ. ಆತನ ಹೆಸರು ಬಾಬಾ ಫರೀದ್.  ಆ ಸಂದರ್ಭದಲ್ಲಿ ಆತ ಅಲ್ಲಿನ ಕಲ್ಲು ಬೆಂಚಿನ ಮೇಲೆ 40 ದಿನಗಳ ಕಾಲ ಧ್ಯಾನ ಮಾಡಿದ್ದ ಎನ್ನುತ್ತಾರೆ. ಅಂದಿನಿಂದ ಮೆಕ್ಕಾಗೆ ಭೇಟಿ ನೀಡುವ ಭಾರತೀಯ ಭಕ್ತಾದಿಗಳು ಜೆರುಸಲೆಂನ ಈ ಸ್ಥಳಕ್ಕೆ ಬಂದು ಭೇಟಿ ನೀಡುವ ಪರಿಪಾಠ ಪ್ರಾರಂಭವಾಯಿತು. 

ಈ ಸ್ಥಳವೇ ಚಿಕಿತ್ಸಾ ಕೇಂದ್ರವಾಗಿ ಮಾರ್ಪಾಡಾಗಿದೆ. ಎಂಥ ಗಂಭೀರ ಆರೋಗ್ಯ ಸಮಸ್ಯೆಯಿದ್ದರೂ ಇಲ್ಲಿ ಪರಿಹಾರವಾಗುತ್ತದೆ ಎನ್ನುವ ನಂಬಿಕೆ ಭಕ್ತಾದಿಗಳದ್ದು. ಈ ಸ್ಥಳವನ್ನು ಭಾರತ ಸರ್ಕಾರ ೧೯೬೦ರಿಂದಲೂ ಪೋಷಿಸಿಕೊಂಡು ಬಂದಿದೆ. ವಿಶ್ವ ಮಹಾಯುದ್ಧ ಸಮಯದಲ್ಲಿ ಬ್ರಿಟಿಷ್ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಭಾರತೀಯ ಸೈನಿಕರು ಇಸ್ರೇಲಿಗೆ ಬಂದಾಗ ಈ ಸ್ಥಳದಲ್ಲಿಯೇ ಆಶ್ರಯ ಪಡೆದಿದ್ದರು ಎನ್ನುವುದು ವಿಶೇಷ.

ಬಾಬಾ ಫರೀದ್ ಸ್ಥಳಕ್ಕೆ ಭೇಟಿ ನೀಡಿದ ಜೈಶಂಕರ್ 'ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧ ೧೨ನೇ ಶತಮಾನಕ್ಕೂ ಹಳೆಯದು ಎನ್ನುವುದರ ದ್ಯೋತಕ ಇದು' ಎಂದು ಬಣ್ಣಿಸಿದ್ದಾರೆ

SCROLL FOR NEXT