ದೇಶ

ಬೆಂಗಳೂರಿನಲ್ಲಿರುವ 72 ರೋಹಿಂಗ್ಯಾಗಳನ್ನು ತಕ್ಷಣ ಗಡಿಪಾರು ಮಾಡುವ ಯಾವುದೇ ಚಿಂತನೆ ಇಲ್ಲ: ಸುಪ್ರೀಂಗೆ ಕರ್ನಾಟಕ ಸರ್ಕಾರ

Lingaraj Badiger

ನವದೆಹಲಿ: ಬೆಂಗಳೂರಿನಲ್ಲಿ ನೆಲೆಸಿರುವ 72 ರೋಹಿಂಗ್ಯಾಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಮಾಡಿದ ಮನವಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ, ತಕ್ಷಣದಿಂದಲೇ ಗಡಿಪಾರು ಮಾಡುವ ಯಾವುದೇ ಯೋಜನೆ ರಾಜ್ಯ ಸರ್ಕಾರ ಮುಂದೆ ಇಲ್ಲ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿ ಸಮರ್ಥನೀಯವಲ್ಲ, ಅರ್ಹತೆಗಳಿಲ್ಲ. ಹೀಗಾಗಿ ಆ ಅರ್ಜಿಯನ್ನು ವಜಾಗೊಳಿಸಬೇಕು ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

"ಬೆಂಗಳೂರು ನಗರ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಶಿಬಿರ ಅಥವಾ ಬಂಧನ ಕೇಂದ್ರದಲ್ಲಿ ರೋಹಿಂಗ್ಯಾಗಳನ್ನು ಇರಿಸಿಲ್ಲ. ಬೆಂಗಳೂರು ನಗರದಲ್ಲಿ ಗುರುತಿಸಲಾದ 72 ರೋಹಿಂಗ್ಯಾಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಬೆಂಗಳೂರು ನಗರ ಪೊಲೀಸರು ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.

ರೋಹಿಂಗ್ಯಾಗಳನ್ನು ಗಡಿಪಾರು ಮಾಡುವ ಯಾವುದೇ ತಕ್ಷಣದ ಯೋಜನೆ ಇಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಿದೆ.

ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಸೇರಿದಂತೆ ಎಲ್ಲಾ ಅಕ್ರಮ ವಲಸಿಗರು ಮತ್ತು ನುಸುಳುಕೋರರನ್ನು ಒಂದು ವರ್ಷದೊಳಗೆ ಗುರುತಿಸಿ ಬಂಧಿಸಬೇಕು ಮತ್ತು ಗಡಿಪಾರು ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

SCROLL FOR NEXT