ದೇಶ

ಎಲ್‌ಒಸಿಯಲ್ಲಿ ಗಸ್ತು ತಿರುಗುತ್ತಿದ್ದಾಗ ನಿಗೂಢ ಸ್ಫೋಟ; ಇಬ್ಬರು ಸೈನಿಕರು ಸಾವು

Srinivasamurthy VN

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶನಿವಾರ ನಡೆದ ನಿಗೂಢ ಸ್ಫೋಟವೊಂದರಲ್ಲಿ ಸೇನಾ ಅಧಿಕಾರಿ ಮತ್ತು ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನಾಮೂಲಗಳು ತಿಳಿಸಿವೆ. 

ನೌಶೇರಾ ಸೆಕ್ಟರ್‌ನ ಕಲಾಲ್ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಶಂಕೆ ಮೇರೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸೇನಾಪಡೆಯು ಗಸ್ತು ಕರ್ತವ್ಯದಲ್ಲಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಲೆಫ್ಟಿನೆಂಟ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ನಂತರ ಅವರು ಮೃತಪಟ್ಟರು ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಮೃತ ಸೈನಿಕರನ್ನು ಲೆಫ್ಟಿನೆಂಟ್ ರಿಷಿ ಕುಮಾರ್ ಮತ್ತು ಸೆಪೆಯೋ ಮಂಜಿತ್ ಸಿಂಗ್ ಎಂದು ಗುರುತಿಸಲಾಗಿದೆ.  ಸ್ಫೋಟ ಸಂಭವಿಸಿರುವುದನ್ನು ರಕ್ಷಣಾ ವಕ್ತಾರರು ದೃಢಪಡಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.

ಸ್ಫೋಟ ಸಂಭವಿಸಿದ ಪ್ರದೇಶವು ಒಳನುಸುಳುವಿಕೆ ನಿಗ್ರಹ ವ್ಯವಸ್ಥೆಯ ಭಾಗವಾಗಿ ಸೇನೆಯು ಹುದುಗಿಸಿಟ್ಟಿದ್ದ ನೆಲಬಾಂಬ್‌ಗಳಿಂದ ಕೂಡಿತ್ತು. ಸ್ಫೋಟದ ಸ್ವರೂಪವು ತಕ್ಷಣವೇ ತಿಳಿದು ಬಂದಿಲ್ಲ, ಗಸ್ತು ತಂಡವನ್ನು ಗುರಿಯಾಗಿಸಲು ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಬಳಸಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

SCROLL FOR NEXT