ದೇಶ

ನೀಟ್ ಪರೀಕ್ಷೆ ಫೇಲ್ ಆಗುವ ಭಯದಿಂದ ವಿದ್ಯಾರ್ಥಿನಿ ಆತ್ಮಹತ್ಯೆ: ತಮಿಳುನಾಡಿನಲ್ಲಿ ನೀಟ್ ಗೆ ಇದು ಎರಡನೇ ಬಲಿ

Harshavardhan M

ಚೆನ್ನೈ: ಅರಿಯಲುರ್ ಜಿಲ್ಲೆಯ ಸತಂಪಡಿ ಗ್ರಾಮದ 19 ವರ್ಷದ ವಿದ್ಯಾರ್ಥಿನಿ ಕೆ.ಕನ್ನಿಮೋಳಿ ಅತ್ಮಹತ್ಯೆ ಮಾಡಿಕೊಂಡಾಕೆ. ಆಕೆ ಇತ್ತೀಚಿಗಷ್ಟೆ ನೀಟ್ ಪ್ರವೇಶ ಪರೀಕ್ಷೆ ಬರೆದಿದ್ದಳು. ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಆಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ಪೋಷಕರಿಬ್ಬರೂ ವಕೀಲರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಕನ್ನಿಮೋಳಿ ಬೇಸರದಿಂದಿದ್ದಳು ಎನ್ನಲಾಗಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂದು ಆಕೆ ಪೋಷಕರಲ್ಲಿ ಹೇಳಿಕೊಂಡಿದ್ದಳು. ಹಾಗಾಗಿ ತಾನು ಪರೀಕ್ಷೆ ಪಾಸಾಗುವುದಿಲ್ಲ ಎಂದು ಆಕೆ ಹೇಳಿದ್ದಳು. ಪೋಷಕರು ಆಕೆಗೆ ಸಮಾಧಾನ ಹೇಳಿದ್ದರೂ ಆಕೆ ಬೇಸರದಿಂದ ಹೊರ ಬಂದಿರಲಿಲ್ಲ. ಪೋಷಕರು ಕಾರ್ಯಕ್ರಮ ನಿಮಿತ್ತ ಪಕ್ಕದ ಊರಿಗೆ ಹೋಗಿದ್ದ ಸಮಯದಲ್ಲಿ ಕನ್ನಿಮೋಳಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಕನ್ನಿಮೋಳಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 562 ಅಂಕಗಳನ್ನು ಪಡೆದಿದ್ದಳು. ಇತ್ತೀಚಿಗಷ್ಟೆ ಧನುಷ್ ಎಂಬ ನೀಟ್ ಪರೀಕ್ಷೆ ಬರೆದಿದ್ದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದ. ಸರ್ಕಾರ ನೀಟ್ ಪರೀಕ್ಷೆ ರದ್ದು ಪಡಿಸುವ ವಿಚಾರವಾಗಿ ಕೆಲವು ಸಮಯದಿಂದ ಹೇಳಿಕೆಗಳನ್ನು ನೀಡಿತ್ತು. ನೀಟ್ ಪರೀಕ್ಷೆ ರದ್ದಾಗುವುದೆಂದು ಹಲವು ಮಂದಿ ವಿದ್ಯಾರ್ಥಿಗಳು ಚೆನ್ನಾಗಿ ತಯಾರಾಗಿರಲಿಲ್ಲ. ಸರ್ಕಾರದ ಗೊಂದಲಮಯ ಹೇಳಿಕೆಯಿಂದ ವಿದ್ಯಾರ್ಥಿಗಳು ಒತ್ತಡಕ್ಕೀಡಾಗಿದ್ದಾರೆ ಎಂದು ಪ್ರತಿ ಪಕ್ಷ ಆರೋಪಿಸಿತ್ತು.

SCROLL FOR NEXT